ನವದೆಹಲಿ: ಸುಸ್ತಿ ಸಾಲ, ಸುಸ್ತಿದಾರರು ಯಾವ ಬ್ಯಾಂಕ್‌ಗಳಿಗೂ ಕೂಡ ಬಾಧಿಸದೆ ಇರುವುದಿಲ್ಲ. ಎಸ್‌ಬಿಐ, ಪಿಎನ್‌ಬಿ, ಕೆನರಾ ಬ್ಯಾಂಕ್ ಸೇರಿ ಹಲವು ಪ್ರಮುಖ ಬ್ಯಾಂಕ್‌ಗಳು ಕೂಡ ಸುಸ್ತಿದಾರರಿಂದ (ಸಾಲ ಮರುಪಾವತಿ ಮಾಡದವರು) ಬಳಲುತ್ತವೆ. ಸಹಕಾರಿ ಬ್ಯಾಂಕ್‌ಗಳು ಕೂಡ ಇದಕ್ಕೆ ಹೊರತಲ್ಲ. ಈ ಸುಸ್ತಿದಾರರಿಂದ ಸಾಲ ವಸೂಲಿ ಮಾಡುವ ದಿಸೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆ ಇರಿಸಿದೆ. “ಶೀಘ್ರದಲ್ಲೇ ಸಹಕಾರಿ ಬ್ಯಾಂಕ್‌ಗಳು ಕೂಡ ಸುಸ್ತಿದಾರರ ಜತೆ ರಾಜಿ, ರೈಟ್-ಆಫ್ (Write-Off: ಸಾಲದ ಲೆಕ್ಕವನ್ನು ಮುಖ್ಯ ಪುಸ್ತಕದಿಂದ ಬೇರೆ ಪುಸ್ತಕಕ್ಕೆ ವರ್ಗಾಯಿಸುವುದು) ಮಾಡಬಹುದು” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
“ಸಹಕಾರಿ ಬ್ಯಾಂಕ್‌ಗಳು ಕೂಡ ಅನುತ್ಪಾದಕ ಆಸ್ತಿಯ (Non-Performing Asset) ಪ್ರಮಾಣ ತಗ್ಗಿಸಲು, ಸಮಸ್ಯೆ ಬಗೆಹರಿಸಿಕೊಳ್ಳಲು ನೆರವಾಗುವ ದಿಸೆಯಲ್ಲಿ ಶೀಘ್ರದಲ್ಲಿಯೇ ಸುಸ್ತಿದಾರರ ಜತೆ ರಾಜಿ ಮಾಡಿಕೊಂಡು, ಸಾಲ ವಸೂಲಿ ಮಾಡುವ (Compromise Settlements) ಹಾಗೂ ರೈಟ್-ಆಫ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಆರ್‌ಬಿಐ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ” ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದರು.
“ಸಹಕಾರಿ ಬ್ಯಾಂಕ್‌ಗಳು ಕೂಡ ಹೇಗೆ ಸುಸ್ತಿದಾರರ ಜತೆ ಸಂಧಾನ ಮಾಡಿಕೊಂಡು, ಅನುಕೂಲಕರ ಮಾರ್ಗಗಳಲ್ಲಿ ಸಾಲ ವಸೂಲಿ ಮಾಡಬಹುದು, ಸಾಲದ ರೈಟ್-ಆಫ್ ಮಾಡಬಹುದು ಎಂಬ ಕುರಿತು ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಾಗುತ್ತದೆ” ಎಂದು ತಿಳಿಸಿದರು. ಹಾಗೆಯೇ, “ನಗರ ಸಹಕಾರಿ ಬ್ಯಾಂಕ್‌ಗಳ ಗುರಿ ಸಾಧನೆ, ಡಿಜಿಟಲ್ ಸಾಲ ಪಾವತಿ ಸೇರಿ ಹಲವು ವಿಷಯಗಳಲ್ಲಿ ಬದಲಾವಣೆ, ಪೂರಕ ವಾತಾವರಣ ಸೃಷ್ಟಿಯ ಅಗತ್ಯವಿದೆ” ಎಂದು ಕೂಡ ಮಾಹಿತಿ ನೀಡಿದರು. ಭಾರತದಲ್ಲಿ ಸುಮಾರು ಒಂದು ಲಕ್ಷ (ನಗರ ಹಾಗೂ ಗ್ರಾಮೀಣ ಸೇರಿ) ಸಹಕಾರಿ ಬ್ಯಾಂಕ್‌ಗಳಿವೆ.
ಇದನ್ನೂ ಓದಿ: RBI Monetary policy meeting: ಸಾಲಗಾರರಿಗೆ ಶುಭ ಸುದ್ದಿ, ರೆಪೋ ರೇಟ್ ಬದಲಾವಣೆ ಇಲ್ಲ!
ಏನಿದು ಸಾಲದ ರೈಟ್-ಆಫ್?
ಬ್ಯಾಲೆನ್ಸ್ ಶೀಟ್‌ನಲ್ಲಿ ಅನುತ್ಪಾದಕ ಆಸ್ತಿಯ ಹೊರೆ ಕಡಿಮೆ ಮಾಡಲು ಸಾಲದ ಲೆಕ್ಕವನ್ನು ಮುಖ್ಯ ಸಾಲ ಪುಸ್ತಕದಿಂದ ತೆಗೆದು ಬೇರೆ ಪುಸ್ತಕಕ್ಕೆ ವರ್ಗಾಯಿಸುವುದು. ಸಾಲಗಾರರಿಂದ ಸಾಲ ವಸೂಲಿ ಮಾಡಲು ಯಾವ ಮಾರ್ಗದ ಮೂಲಕವೂ ಸಾಧ್ಯವಾಗದಿದ್ದಾಗ ಬ್ಯಾಂಕ್‌ಗಳು ಇಂತಹ ಕ್ರಮ ಅನುಸರಿಸುತ್ತವೆ. ಹಾಗಂತ, ಇದರ ಅರ್ಥ ಸಾಲ ಮನ್ನಾ ಅಲ್ಲ. ರೈಟ್-ಆಫ್ ಮಾಡಿದರೆ ಸಾಲಗಾರನು ಋಣಮುಕ್ತನಾಗುವುದಿಲ್ಲ. ಆತ ಮರುಪಾವತಿ ಮಾಡಲೇಬೇಕಾಗುತ್ತದೆ.