ಭೋಪಾಲ್: ಯಾವುದೋ ಮಹತ್ವದ ಕೇಸ್ ಭೇದಿಸಲು ಪೊಲೀಸ್ ಅಧಿಕಾರಿಯೊಬ್ಬರು ಮಾರುವೇಷದಲ್ಲಿ ಹೋಗುವುದನ್ನು, ಆರೋಪಿಗಳ ಜತೆಯಲ್ಲೇ ಇದ್ದು, ಕೇಸ್ ಜಾಲಾಡಿ ಅವರನ್ನು ಬಂಧಿಸುವುದು, ಅದಕ್ಕಾಗಿ ಅವರು ಮೈಮೇಲೆ ಎಳೆದುಕೊಳ್ಳುವ ಅಪಾಯವನ್ನೆಲ್ಲ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಮಧ್ಯಪ್ರದೇಶದಲ್ಲಿ ಹೀಗೊಂದು ನೈಜ ಘಟನೆಯೇ ನಡೆದಿದೆ. 24 ವರ್ಷದ ಪೊಲೀಸ್ ಕಾನ್ಸ್ಟೆಬಲ್ ಶಾಲಿನಿ ಚೌಹಾಣ್ ಎಂಬುವರು ‘ವಿದ್ಯಾರ್ಥಿನಿ’ಯ ಸೋಗಿನಲ್ಲಿ ಕಾಲೇಜು ಸೇರಿಕೊಂಡು ‘ಆರು ತಿಂಗಳ ಹಿಂದಿನ ಒಂದು ರ‍್ಯಾಗಿಂಗ್ ಕೇಸ್ ಭೇದಿಸಿದ್ದಾರೆ’. ಇದೊಂದು ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ ರೋಚಕ ಸ್ಟೋರಿ ಎಂಬುದರಲ್ಲಿ ಅನುಮಾನವಿಲ್ಲ!
ಮಧ್ಯಪ್ರದೇಶದ ಇಂದೋರ್ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲ ಹಿರಿಯ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಮಿತಿಮೀರಿದೆ. ಅವರು ಕಿರಿಯರನ್ನು, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಮಾಡುತ್ತಿದ್ದಾರೆ. ಅಶ್ಲೀಲವಾಗಿ ವರ್ತಿಸುವಂತೆ ಪೀಡಿಸುತ್ತಿದ್ದಾರೆ ಎಂದು 2022ರ ಜುಲೈ 24ರಂದು ಎಂಜಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಹಾಯವಾಣಿಗೆ ದೂರು ನೀಡಿದ್ದಳು. ಹಾಗೇ, ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ವಾಟ್ಸ್ಆ್ಯಪ್ನಲ್ಲಿ ಮಾಡಿದ ಕೆಟ್ಟ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನೂ ಆಕೆ ಯುಜಿಸಿಗೆ ಒದಗಿಸಿದ್ದಳು. ಆದರೆ ರ‍್ಯಾಗಿಂಗ್ ಮಾಡಿದವರ ಹೆಸರಾಗಲಿ, ಎಷ್ಟು ಜನ ಇದರಲ್ಲಿ ಭಾಗಿಯಾಗಿದ್ದಾರೆ ಎಂಬಿತ್ಯಾದಿ ಮಾಹಿತಿ ಈ ದೂರಿನಲ್ಲಿ ಇರಲಿಲ್ಲ. ಹಾಗೇ, ಕಂಪ್ಲೇಂಟ್ ಕೊಟ್ಟ ಯುವತಿಯ ಹೆಸರೂ ಕೂಡ ಉಲ್ಲೇಖ ಆಗಿರಲಿಲ್ಲ. ಹೀಗೆ ಯುವತಿ ಕೊಟ್ಟ ದೂರನ್ನು ಯುಜಿಸಿ, ಯಥಾವತ್ತಾಗಿ ಪೊಲೀಸರಿಗೆ ನೀಡಿತ್ತು. ಪೊಲೀಸರು ‘ಅಪರಿಚಿತ ವಿದ್ಯಾರ್ಥಿಗಳ’ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಆ ಹುಡುಗರು ಯಾರು? ರ‍್ಯಾಗಿಂಗ್ ಸ್ವರೂಪ ಎಂಥದ್ದು? ಎಂಬಿತ್ಯಾದಿ ವಿವರಗಳನ್ನು ಕಲೆಹಾಕಲು ಅವರಿಗೆ ಸರಿಯಾಗಿ ಸಾಕ್ಷಿಯೇ ಸಿಗುತ್ತಿರಲಿಲ್ಲ.
ಫೀಲ್ಡಿಗೆ ಇಳಿದ ಶಾಲಿನಿ
ರ‍್ಯಾಗಿಂಗ್ ಕೇಸ್ ಭೇದಿಸಲು ಪೊಲೀಸ್ ಸಿಬ್ಬಂದಿ ಕೆಲವರು ಮಾರುವೇಷದಲ್ಲಿ ಕಾಲೇಜಿಗೆ ಹೋಗಲು ಶುರು ಮಾಡಿದರು. ಆದರೆ ಅಲ್ಲಿನ ವಿದ್ಯಾರ್ಥಿಗಳೂ ಸಖತ್ ಸ್ಮಾರ್ಟ್. ಮಾರುವೇಷದಲ್ಲಿ ಪೊಲೀಸರು ಹೋದಾಗ ಅದು ಹೇಗೋ ಅವರಿಗೆ ಗೊತ್ತಾಗಿಬಿಡುತ್ತಿತ್ತು. ಸಭ್ಯರಂತೆ ಇದ್ದುಬಿಡುತ್ತಿದ್ದರು. ಹೀಗೇ ಆದರೆ ಯುಜಿಸಿ ಕೊಟ್ಟ ದೂರಿನ ಕೇಸ್ ಜಾಲಾಡಲು ಸಾಧ್ಯವೇ ಇಲ್ಲ ಎಂದರಿತ ಮಧ್ಯಪ್ರದೇಶ ಪೊಲೀಸರು, ಕೊನೆಗೂ ಒಂದು ಯೋಜನೆ ರೂಪಿಸಿಯೇ ಬಿಟ್ಟರು. 24 ವರ್ಷದ ಪೊಲೀಸ್ ಕಾನ್ಸ್ಟೆಬಲ್ ಶಾಲಿನಿ ಎಂಬುವರನ್ನು ಕಾಲೇಜಿಗೆ ಕಳಿಸಿದರು. ಅದೂ ಅವರೊಬ್ಬ ವೈದ್ಯಕೀಯ ವಿದ್ಯಾರ್ಥಿನಿಯಂತೇ ಹೋಗಿ, ಎಂಬಿಬಿಎಸ್ ಮೊದಲ ವರ್ಷಕ್ಕೆ ಸೇರಿಕೊಂಡರು.
ಆಕೆ ವಾಸ್ತವದಲ್ಲಿ ಪೊಲೀಸ್ ಆಗಿದ್ದು, ವಿದ್ಯಾರ್ಥಿನಿಯ ಸೋಗಿನಲ್ಲಿ ಕಾಲೇಜು ಒಳಹೊಕ್ಕಿ ಕಾರ್ಯಾಚರಣೆ ಪ್ರಾರಂಭ ಮಾಡಿದರು. ತನ್ನ ಮೇಲಧಿಕಾರಿಗಳ ಸೂಚನೆಯಂತೆ ನಡೆದುಕೊಂಡರು. ಎಲ್ಲ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಕಿರಿಯರು ತಮ್ಮ ನೋವನ್ನು ಹೇಳಿಕೊಳ್ಳುವಷ್ಟು ಅವರಿಗೆ ಆಪ್ತರಾದರು. ಹಾಗೇ, ಹೆಚ್ಚೆಚ್ಚು ಸಮಯ ಕ್ಯಾಂಟೀನ್ನಲ್ಲಿ ಕುಳಿತು ಅದೇನೋ ಓದುತ್ತಿರುವಂತೆ ನಟಿಸುತ್ತಿದ್ದರು. ಅವರೆಷ್ಟು ಚೆನ್ನಾಗಿ ಅಭಿನಯಿಸಿದರು ಎಂದರೆ, ಒಬ್ಬರೇ ಒಬ್ಬರಿಗೂ ಅವರು ವಿದ್ಯಾರ್ಥಿನಿಯಲ್ಲ, ಪೊಲೀಸ್ ಕಾನ್ಸ್ಟೆಬಲ್ ಎಂಬ ಸಣ್ಣ ಅನುಮಾನ ಮೂಡಲಿಲ್ಲ. ಅಂತಿಮವಾಗಿ ಶಾಲಿನಿ ಈಗ ತಮ್ಮ ಕಾರ್ಯಾಚರಣೆ ಮುಗಿಸಿದ್ದಾರೆ. ರ‍್ಯಾಗಿಂಗ್ ಆಗಿದ್ದು ದೃಢಪಟ್ಟಿದ್ದಲ್ಲದೆ, ಈ ಕೇಸ್ನಲ್ಲಿ 11 ಹುಡುಗರು ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ಪೊಲೀಸ್ ಇಲಾಖೆಯಿಂದ ನೋಟಿಸ್ ಹೋಗಿದೆ. 11 ಮಂದಿಯಲ್ಲಿ 9 ವಿದ್ಯಾರ್ಥಿಗಳು ಮಧ್ಯಪ್ರದೇಶದವರೇ ಆಗಿದ್ದು, ಒಬ್ಬಾತ ಪಶ್ಚಿಮ ಬಂಗಾಳದವನು ಮತ್ತು ಇನ್ನೊಬ್ಬಾತ ಬಿಹಾರದವನು. ಈ 11 ವಿದ್ಯಾರ್ಥಿಗಳನ್ನು ಕಾಲೇಜು ಕಳೆದವಾರವೇ ಅಮಾನತು ಮಾಡಿದೆ.
ಈ ಬಗ್ಗೆ ಮಾತನಾಡಿದ ಶಾಲಿನಿ ಚೌಹಾಣ್, ‘ನಾನು ವಿದ್ಯಾರ್ಥಿನಿಯಂತೆಯೇ ಹೋಗಿ ಕಾಲೇಜು ಸೇರಿಕೊಂಡೆ. ನಾನೇನು ಮಾಡಬೇಕು ಎಂಬುದನ್ನು ನನ್ನ ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ದರು. ಬಿಡುವಿನ ಸಮಯದಲ್ಲಿ ಕ್ಯಾಂಟೀನ್ಗೆ ಹೋಗಿ ಕುಳಿತು ಓದುತ್ತಿದ್ದೆ. ಮೊದಮೊದಲು ಯಾವುದೇ ಸುಳಿವು ಸಿಗುತ್ತಿರಲಿಲ್ಲ. ಆದರೆ ನಂತರ ನಮಗೆ ತುಂಬ ಉಪಯುಕ್ತವಾದ ಮಾಹಿತಿ ಸಿಗುತ್ತ ಹೋಯಿತು. ನಮ್ಮ ತನಿಖಾ ತಂಡಕ್ಕೆ ಕೆಲಸ ಸುಲಭವಾಗುತ್ತ ಹೋಯಿತು. ರ‍್ಯಾಗಿಂಗ್ ಮಾಡುತ್ತಿದ್ದ ಹುಡುಗರು ಸಿಕ್ಕಿಬಿದ್ದರು’ ಎಂದು ಶಾಲಿನಿ ತಿಳಿಸಿದ್ದಾರೆ.
ಇದನ್ನೂ ಓದಿ: Combing Operation | ಮಧ್ಯಪ್ರದೇಶ ಪೊಲೀಸರು ರಾತ್ರೋರಾತ್ರಿ 9000 ಕ್ರಿಮಿನಲ್ಸ್ ಬಂಧಿಸಿದ್ದು ಯಾಕೆ?