ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ನಬಾ ಕಿಶೋರ್ ದಾಸ್ (Naba Kishore Das) ಅವರ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಅವರನ್ನು ಜಾರ್ಸುಗುಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಾರ್ಸುಗುಡ ಜಿಲ್ಲಾ ಪೊಲೀಸ್ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಆಗಿರುವ ಗೋಪಾಲ್ ಚಂದ್ರ ದಾಸ್ ಈ ಕೃತ್ಯ ಎಸಗಿದ್ದಾಗಿ ವರದಿಯಾಗಿದೆ.
ಜಾರ್ಸುಗುಡ ಜಿಲ್ಲೆಯ ಗಾಂಧಿ ಚೌಕ್ ಬಳಿಯಿರುವ ಬ್ರಜರಾಜನಗರದಲ್ಲಿ ನೂತನವಾಗಿ ನಿರ್ಮಾಣವಾದ ಬಿಜು ಜನತಾ ದಳ ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಆಗಮಿಸಿದ್ದರು. ಅವರು ಕಾರು ಇಳಿದು ಕಚೇರಿಯತ್ತ ಹೋಗುತ್ತಿರುವಾಗಲೇ, ಪೊಲೀಸ್ ಅಧಿಕಾರಿ ತಮ್ಮ ಕೈಲಿದ್ದ ಸರ್ವೀಸ್ ಪಿಸ್ತೂಲ್ನಿಂದ ನಾಲ್ಕರಿಂದ ಐದು ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡುಗಳು ಸಚಿವರ ಎದೆಗೇ ಹೋಗಿ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: Cricketer Found Dead | ಒಡಿಶಾದ ಮಹಿಳಾ ಕ್ರಿಕೆಟರ್ ಮೃತದೇಹ ಕಟಕ್ನ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಎಎಸ್ಐ ಗೋಪಾಲ ಚಂದ್ರ ದಾಸ್ ಅವರು ಗಾಂಧಿ ಚೌಕ್ ಬಳಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಸಚಿವರ ಕಾರು ಅಲ್ಲಿಯೇ ನಿಂತು, ಅವರು ಕಾರು ಇಳಿಯುತ್ತಿದ್ದಂತೆ ಗುಂಡು ಹೊಡೆದಿದ್ದಾರೆ. ಗೋಪಾಲ ಚಂದ್ರದಾಸ್ರನ್ನು ಕೂಡಲೇ ಉಳಿದ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಉನ್ನತ ಮಟ್ಟದ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿ ಫೈರಿಂಗ್ ಮಾಡಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಶೀಘ್ರವೇ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಗುಪ್ತೇಶ್ವರ್ ಭೋಯಿ ತಿಳಿಸಿದ್ದಾರೆ.