ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಭದ್ರತಾ ಸಿಬ್ಬಂದಿಯ ಕಟ್ಟೆಚ್ಚರ, ಕಾರ್ಯಾಚರಣೆ, ಎನ್‌ಕೌಂಟರ್, ಪ್ರತಿದಾಳಿಯನ್ನು ಎದುರಿಸಲು ಆಗದ ಉಗ್ರರು ಇತ್ತೀಚಿನ ದಿನಗಳಲ್ಲಿ ನಾಗರಿಕರು, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ (Terrorists Attack) ನಡೆಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಂಗಳವಾರ (ಅಕ್ಟೋಬರ್ 31) ಬಾರಾಮುಲ್ಲಾದಲ್ಲಿ (Baramulla) ಉಗ್ರರು ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನದಲ್ಲಿ ನಿಗದಿತ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಉಗ್ರರು ಮೂವರನ್ನು ಹತ್ಯೆಗೈದಂತಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಕ್ರಾಲ್‌ಪೊರಾ ಗ್ರಾಮದಲ್ಲಿರುವ ಮನೆಯಲ್ಲಿದ್ದಾಗ ಉಗ್ರರು ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ, ಗುಂಡಿನ ದಾಳಿ ನಡೆಸಿದ್ದಾರೆ. ಕರ್ತವ್ಯದಿಂದ ಬಿಡುವು ಪಡೆದು ಮನೆಯಲ್ಲಿರುವಾಗಲೇ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸ್ ಅಧಿಕಾರಿಯನ್ನು (ಪೇದೆ) ಗುಲಾಂ ಮೊಹಮ್ಮದ್ ದರ್) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗುಲಾಂ ಮೊಹಮ್ಮದ್ ದರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
#Terrorists fired upon one JKP personnel HC Gh Mohd Dar resident of Wailoo Kralpora in #Baramulla at his residence. Shifted to SDH Tangmarg for treatment. Health condition critical.@JmuKmrPolice
— Kashmir Zone Police (@KashmirPolice) October 31, 2023
ಹಿರಿಯ ಪೊಲೀಸ್ ಪೇದೆ ಗುಲಾಂ ಮೊಹಮ್ಮದ್ ದರ್ ಅವರ ಮನೆಯ ಮೇಲೆ ಉಗ್ರರು ದಾಳಿ ನಡೆಸಿದ ವಿಷಯ ತಿಳಿಯುತ್ತಲೇ ಭದ್ರತಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದ್ದು, ಉಗ್ರರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. “ವೈಲೂ ಕ್ರಾಲ್‌ಪೊರಾ ಗ್ರಾಮದಲ್ಲಿ ಮುಖ್ಯ ಪೇದೆ ಗುಲಾಂ ಮೊಹಮ್ಮದ್ ದರ್ ಅವರ ಮನೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ” ಎಂದು ‘ಕಾಶ್ಮೀರ ಜೋನ್’ ಪೊಲೀಸ್ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Kashmir Terrorism: ಕಾಶ್ಮೀರದಲ್ಲಿ ಉ.ಪ್ರ.ದ ಕಾರ್ಮಿಕನ ಗುಂಡಿಕ್ಕಿ ಹತ್ಯೆ
ಮೂರು ದಿನದಲ್ಲಿ ಮೂವರ ಹತ್ಯೆ
ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ಸತತ ಮೂರು ದಿನಗಳಿಂದ ದಾಳಿ ನಡೆಸಲಾಗುತ್ತಿದೆ. ಭಾನುವಾರ (ಅಕ್ಟೋಬರ್ 29) ಶ್ರೀನಗರದಲ್ಲಿ ಮಸೂರ್ ಅಹ್ಮದ್ ವಾನಿ ಎಂಬ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಸೋಮವಾರ (ಅಕ್ಟೋಬರ್ 30) ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು. ಈಗ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ ಭದ್ರತಾ ಸಿಬ್ಬಂದಿಯು 46 ಉಗ್ರರನ್ನು ಹೊಡೆದುರುಳಿಸಲಾಗಿದೆ. ಹತರಾದ 46 ಉಗ್ರರ ಪೈಕಿ 37 ಉಗ್ರರು ವಿದೇಶಿಗರಾಗಿದ್ದಾರೆ. ಸ್ಥಳೀಯ ಉಗ್ರರು ಕೇವಲ 9 ಮಂದಿ. ಕಳೆದ 33 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಉಗ್ರರಕ್ಕಿಂತ ವಿದೇಶಿ ಉಗ್ರರ ಹತ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.