Site icon Vistara News

Odisha Train Accident: ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಅಪಘಾತ; ಏರಿದ ಸಾವಿನ ಸಂಖ್ಯೆ

Train Accident In Odisha

Coromandel Express, Goods Train Collision In Balasore, Many Feared Dead

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಶಾಲಿಮಾರ್‌-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿ (Odisha Train Accident) 70ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನ ಐದಾರು ಬೋಗಿಗಳು ಹಳಿತಪ್ಪಿ ಬಿದ್ದಿದ್ದು, 350ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚನ ಜನರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಟ್ವೀಟ್

ರೈಲು ಅಪಘಾತ ಸಂಭವಿಸುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. “ಒಡಿಶಾದಲ್ಲಿ ರೈಲು ಅಪಘಾತದ ಸುದ್ದಿ ತಿಳಿದು ದುಃಖವಾಗಿದೆ. ಅಪಘಾತದ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಜತೆ ಮಾತನಾಡಿದ್ದು, ಮಾಹಿತಿ ಪಡೆದಿದ್ದೇನೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

ರೈಲಿನ ಬೋಗಿಯಲ್ಲಿ ಸಿಲುಕಿದವರ ರಕ್ಷಣೆ.

ಪಶ್ಚಿಮ ಬಂಗಾಳದ ಶಾಲಿಮಾರ್‌ ರೈಲು ನಿಲ್ದಾಣದಿಂದ ಹೊರಟ್ಟಿದ್ದ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಬಾಲಾಸೋರ್‌ ರೈಲು ನಿಲ್ದಾಣಕ್ಕೆ ಜೂನ್‌ 2ರಂದು ಸಂಜೆ 6.30ಕ್ಕೆ ತಲುಪಿತ್ತು. ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಜೂನ್‌ 3ರಂದು ಸಂಜೆ 4.50ಕ್ಕೆ ತಲುಪಬೇಕಿತ್ತು. ಆದರೆ, ಶುಕ್ರವಾರ ಸಂಜೆ ಬಾಲಾಸೋರ್‌ ರೈಲು ನಿಲ್ದಾಣ ದಾಟಿದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Train Accident: ಒಡಿಶಾದಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಅಪಘಾತ; 179 ಜನರಿಗೆ ಗಾಯ

ಅಫಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹತ್ತಾರು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ನ ಸುಮಾರು 600-700 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

“ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಬಾಲಾಶೋರ್‌ ಬಳಿ ಹಳಿ ತಪ್ಪಿದೆ. ಆಗ, ರೈಲಿನ ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿವೆ. ಹಳಿಯ ಮೇಲೆ ಬಿದ್ದ ರೈಲಿನ ಬೋಗಿಗಳಿಗೆ ಹೌರಾ-ಯಶವಂತಪುರ ರೈಲು ಡಿಕ್ಕಿಯಾಗಿದೆ. ಇದರಿಂದಾಗಿ ಅಪಘಾತದ ತೀವ್ರತೆ ಹೆಚ್ಚಾಗಿದೆ” ಎಂದು ರೈಲ್ವೆ ಇಲಾಖೆ ವಕ್ತಾರ ಅಮಿತಾಭ್‌ ಶರ್ಮಾ ಮಾಹಿತಿ ನೀಡಿದ್ದಾರೆ.

Exit mobile version