Site icon Vistara News

coronavirus | ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆ ರದ್ದು ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆದ ಬಿಜೆಪಿ!

Jan Akrosh Yatra @ Rajasthan

ಜೈಪುರ: ಜಾಗತಿಕವಾಗಿ ಕೊರೊನಾ ಪ್ರಕರಣಗಳು (coronavirus) ಹೆಚ್ಚುತ್ತಿವೆ. ಆ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆಯನ್ನು (Jan Aakrosh Yatra) ರದ್ದುಪಡಿಸಲಾಗಿದೆ ಎಂದು ಬಿಜೆಪಿ ಹೇಳಿತ್ತು. ಆದರೆ, ಹೀಗೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನ ಬಿಜೆಪಿ ಉಲ್ಟಾ ಹೊಡೆದಿದೆ. ಅಲ್ಲದೇ, ಈ ಮೊದಲೇ ನಿಗದಿ ಮಾಡಿದಂತೆ ಜನ್ ಆಕ್ರೋಶ್ ಯಾತ್ರೆಯನ್ನು ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವುದರೊಂದಿಗೆ ನಡೆಸಲಾಗುವುದು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್ 1ರಂದು ಜನ್ ಆಕ್ರೋಶ್ ಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆಯನ್ನು ರದ್ದುಗೊಳಿಸಲಾಗುತ್ತಿದೆ. ಬಿಜೆಪಿಗೆ ಜನರೇ ಮೊದಲು, ಆ ಮೇಲೆ ರಾಜಕಾರಣ. ನಮಗೆ ಜನರ ಸುರಕ್ಷತೆ ಮತ್ತು ಅವರ ಆರೋಗ್ಯ ಮಹತ್ವದ್ದಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ದಿಲ್ಲಿಯಲ್ಲಿ ಗುರುವಾರ ಹೇಳಿದ್ದರು.

ಜನ್ ಆಕ್ರೋಶ್ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಅರುಣ್ ಸಿಂಗ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಯಾತ್ರೆಯನ್ನು ರದ್ದುಗೊಳಿಸುವ ಸಂಬಂಧ ಒಂದಿಷ್ಟು ಗೊಂದಲವಾಗಿತ್ತು. ಆದರೆ, ಸಾರ್ವಜನಿಕ ಸಭೆಗಳನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಪಡಿಸಿದರು. ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಬಿಜೆಪಿಯ ಜನ್ ಆಕ್ರೋಶ್ ಯಾತ್ರೆಯು ನಿಗದಿಯಂತೆ ಮುಂದುವರಿಯಲಿದೆ. ನಾವು ಎರಡು ಕೋಟಿ ಜನರನ್ನು ರೀಚ್ ಆಗುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಕೋವಿಡ್‌ ಸುದ್ದಿ ಸಮಗ್ರ | ಕೊರೊನಾ ಭೀತಿ, ದೇಶಾದ್ಯಂತ ಹೈ ಅಲರ್ಟ್, ಕರ್ನಾಟಕದಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯ

Exit mobile version