ನವದೆಹಲಿ: ಕೋವಿಡ್(coronavirus) ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆ ರದ್ದುಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಬುಧವಾರ ಕಾಂಗ್ರೆಸ್‌ಗೆ ಪತ್ರ ಬರೆದಿದ್ದರು. ಬಳಿಕ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲನಾ ಸಭೆಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಭಾರತ್ ಜೋಡೋ ಯಾತ್ರೆಯು ದಿಲ್ಲಿಯನ್ನು ಪ್ರವೇಶಿಸುತ್ತಿದೆ. ಈ ಎಲ್ಲ ‘ಕ್ರೋನಾಲಜಿ ಸಮ್ಜೀಯೇ’ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಅಂದರೆ, ದಿಲ್ಲಿಯನ್ನು ಯಾತ್ರೆ ಪ್ರವೇಶಿಸುವುದನ್ನು ತಡೆಯಲು ಬಿಜೆಪಿಯ ಕೋವಿಡ್ ಅನ್ನು ಮುಂದಿಟ್ಟುಕೊಂಡು ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಪರೋಕ್ಷವಾಗಿ ಟೀಕೆ ಮಾಡಿದೆ.
ಚೀನಾ ಜನ್ಯ ಒಮಿಕ್ರಾನ್ ಸಬ್ ವೇರಿಯಂಟ್‌ನ ನಾಲ್ಕು ಪ್ರಕರಣಗಳು ಗುಜರಾತ್ ಮತ್ತು ಒಡಿಶಾದಲ್ಲಿ ಜುಲೈ, ಸೆಪ್ಟೆಂಬರ್, ನವೆಂಬರ್‌ನಲ್ಲಿ ಪತ್ತೆಯಾಗಿವೆ. ಆದರೆ, ಕೇಂದ್ರ ಆರೋಗ್ಯ ಸಚಿವರು ನಿನ್ನೆ(ಡಿಸೆಂಬರ್ 21) ಪತ್ರ ಬರೆದಿದ್ದಾರೆ. ಅದರ ಮಾರನೇ ದಿನ, ಅಂದರೆ ಇಂದು (ಡಿ.22) ಪ್ರಧಾನಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ನೀವು ಈಗ ಈ ಕ್ರೋನಾಲಜಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಕಾಂಗ್ರೆಸ್ ಪಕ್ಷದ ಮಾಹಿತಿ ವಿಭಾಗದ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ತನಗೆ ಬೇಡವಾದ ಕಾರ್ಯಕ್ರಮಗಳಿಗೆ ಮಾತ್ರವೇ ಕೋವಿಡ್ ನಿಯಮಗಳನ್ನು ಜಾರಿ ಮಾಡಲು ಹೊರಟಿದೆ. ಇದಕ್ಕಾಗಿ ಭಾರತ್ ಜೋಡೋ ಯಾತ್ರೆಯನ್ನು ಆಯ್ದುಕೊಂಡಿದೆ. ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ರ್ಯಾಲಿಗಳನ್ನು ಮಾಡುತ್ತಿದೆ. ಸಾರ್ವಜನಿಕ ಆರೋಗ್ಯವು ಪಕ್ಷ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ತುಂಬಾ ಗಂಭೀರವಾದ ವಿಷಯವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ | Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?