ಸಿಕರ್, ರಾಜಸ್ಥಾನ: ಇಂಡಿಯಾ(INDIA) ಹೆಸರಿನಡಿ ಒಂದಾಗಿರುವ ಪ್ರತಿಪಕ್ಷಗಳ ಕೂಟದ ವಿರುದ್ಧ ಗುರುವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತೀವ್ರ ವಾಗ್ದಾಳಿ ನಡೆಸಿದರು. ‘ಕ್ವಿಟ್ ಇಂಡಿಯಾ’ ಎಂದು ಮಹಾತ್ಮ ಗಾಂಧಿ ಕರೆ ನೀಡಿದಂತೆ, ಪ್ರತಿಪಕ್ಷಗಳ ಕೂಟವನ್ನೂ ತೊಲಗಿಸಬೇಕಿದೆ. ಅದಕ್ಕಾಗಿ ಕರಪ್ಷನ್ ಕ್ವಿಟ್ ಇಂಡಿಯಾ (Corruption Quit India) ಮತ್ತು ಅಪೀಸ್ಮೆಂಟ್ ಕ್ವಿಟ್ ಇಂಡಿಯಾ (Appeasement Quit India) ನಡೆಸಬೇಕಿದೆ ಎಂದು ಪ್ರಧಾನಿ ಹೇಳಿದರು. ಮತ್ತೊಂದೆಡೆ, ರಾಹುಲ್ ಗಾಂಧಿ (Rahul Gandhi) ಅವರು, ಪ್ರಧಾನಿ ಮೋದಿ ಆರೆಸ್ಸೆಸ್ (Modi is RSS PM) ಪ್ರಧಾನಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಸಿಕರ್‌ನಲ್ಲಿ ಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂಡಿಯಾ ಎಂಬ ಹೆಸರಿನ ಲೇಬಲ್ ಅಂಟಿಸಿಕೊಂಡು, ಯುಪಿಎ ಈ ಹಿಂದೆ ತಾನು ಮಾಡಿದ ತಪ್ಪುಗಳನ್ನು ಮರೆ ಮಾಚಲು ಮುಂದಾಗಿದೆ. ಅವರು ನಿಜವಾಗಲೂ ಭಾರತದ ಬಗ್ಗೆ ಕೇರ್ ಮಾಡ್ತಾರಾ, ಹಾಗಿದ್ದರೆ ವಿದೇಶಿಗರಿಗೆ ಭಾರತ ಸಮಸ್ಯೆಗಳಿಗೆ ಮಧ್ಯಪ್ರವೇಶಿಸುವಂತೆ ಕೇಳುತ್ತಿದ್ರಾ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಹಾತ್ಮಾ ಗಾಂಧಿಯವರು ಕ್ವಿಟ್ ಇಂಡಿಯಾ ಹೇಳಿದ ರೀತಿಯಲ್ಲಿ ಇಂದಿನ ಘೋಷಣೆ ಭ್ರಷ್ಟಾಚಾರ (Corruption) ಕ್ವಿಟ್ ಇಂಡಿಯಾ, ಪರಿವಾರವಾದ್ ಕ್ವಿಟ್ ಇಂಡಿಯಾ, ತುಷ್ಟೀಕರಣ (Appeasment) ಕ್ವಿಟ್ ಇಂಡಿಯಾ. ಕ್ವಿಟ್ ಇಂಡಿಯಾ ದೇಶವನ್ನು ಉಳಿಸುತ್ತದೆ ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು “ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ” ಎಂಬ ಘೋಷಣೆಯನ್ನು ನೀಡಿದ್ದರು. ಆದರೆ ಸಾರ್ವಜನಿಕರು ಕಾಂಗ್ರೆಸ್ ಅನ್ನು ಸೋಲಿಸಿದ್ದರು. ಈಗ ಅದೇ ಕಾಂಗ್ರೆಸ್ ಪಕ್ಷವು ಇಂಡಿಯಾ ಹೆಸರಿನಲ್ಲಿ ಬಂದಿದೆ. ಪ್ರತಿಪಕ್ಷಗಳ ಕೂಟವನ್ನು ಈ ಚುನಾವಣೆಯಲ್ಲಿ ಮತ್ತೆ ಸೋಲಿಸಬೇಕು ಎಂದು ಜನರಿಗೆ ಕರೆ ನೀಡಿದರು.
ಮೋದಿ ಆರೆಸ್ಸೆಸ್ ಪ್ರಧಾನಿ; ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ-ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಆಡಳಿತಾರೂಢ ಬಿಜೆಪಿಯು, ತನ್ನ ಅಧಿಕಾರದ ದಾಹಕ್ಕಾಗಿ ಮಣಿಪುರ ಹೊತ್ತಿ ಉರಿಯಲು ಬಿಟ್ಟಿದ್ದಾರೆಂದು ಟೀಕಿಸಿದ ರಾಹುಲ್ ಗಾಂಧಿ ಅವರು, ”ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಪ್ರಧಾನಿಯಾಗಿದ್ದಾರೆ. ಮಣಿಪುರದಿಂದ ಅವರಿಗೇನೂ ಆಗಬೇಕಿಲ್ಲ. ಅವರಿಗೆ ಗೊತ್ತು, ಅವರು ಪ್ರತಿಪಾದಿಸುವ ಸಿದ್ಧಾಂತವೇ ಇಂದು ಮಣಿಪುರ ಹಿಂಸಾಚಾರಕ್ಕೆ ಕಾರಣ ಎಂದು. ಆದರೆ, ಅವರಿಗೆ ಮಣಿಪುರದ ಮಕ್ಕಳು ಮತ್ತು ಮಹಿಳೆಯರ ನೋವು ಮಾತ್ರ ಗೊತ್ತಾಗುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿಯನ್ನೂ ಓದಿ: ಜನರ ಕಣ್ಣೀರು ಒರೆಸಲು ಮಣಿಪುರಕ್ಕೆ ಹೋದ ರಾಹುಲ್ ಗಾಂಧಿ; ಅಶ್ರುವಾಯು ಪ್ರಯೋಗಿಸಿದ ಪೊಲೀಸ್
ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ರಾಹುಲ್ ಗಾಂಧಿ ಅವರು, ಬಿಜೆಪಿ-ಆರೆಸ್ಸೆಸ್ ಕೇವಲ ಅಧಿಕಾರದ ಬಗ್ಗೆ ಮಾತ್ರ ಚಿಂತಿಸುತ್ತದೆ. ಜನರ ನೋವಿನ ಬಗ್ಗೆ ಅವರು ಕೇರ್ ಮಾಡುವುದಿಲ್ಲ. ಅವರಿಗೆ ಕೇವಲ ಅಧಿಕಾರ ಬೇಕು. ಅದಕ್ಕಾಗಿ ಮಣಿಪುರ ಹೊತ್ತಿರಿಯಲು ಬಿಟ್ಟಿದ್ದಾರೆ. ಅದೇ ಪರಿಸ್ಥಿತಿಯನ್ನು ಹರ್ಯಾಣ, ಪಂಜಾಬ್‌ನಲ್ಲೂ ಮಾಡಬಲ್ಲರು. ಉತ್ತರ ಪ್ರದೇಶ ಹೊತ್ತಿರಿಯಲು ಅವರ ಅಧಿಕಾರ ದಾಹವೇ ಕಾರಣ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.