ಹೊಸ ದಿಲ್ಲಿ: ವಿಶ್ವಾದ್ಯಂತ 300ಕ್ಕೂ ಅಧಿಕ ಸಾವುಗಳಿಗೆ ಕಾರಣವಾಗಿರುವ ವಿಷಪೂರಿತ ಕೆಮ್ಮಿನ ಸಿರಪ್‌ಗಳ (toxic cough syrup) ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆ ನಡೆಸುತ್ತಿದ್ದು, ಭಾರತ ಹಾಗೂ ಇಂಡೋನೇಷ್ಯಾದಲ್ಲಿರುವ 15 ಕಂಪನಿಗಳತ್ತ ಬೊಟ್ಟು ಮಾಡಿದೆ.
ಭಾರತ ಹಾಗೂ ಇಂಡೋನೇಷ್ಯಾಗಳಲ್ಲಿರುವ 15 ವಿವಿಧ ಕಂಪನಿಗಳು ಉತ್ಪಾದಿಸುತ್ತಿರುವ 20 ಉತ್ಪನ್ನಗಳು ವಿಷಪೂರಿತವಾಗಿದ್ದು, ಸಾವುನೋವುಗಳಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಕ್ರಿಸ್ತಿಯನ್ ಲಿಂಡ್‌ಮೇರರ್ ಹೇಳಿದ್ದಾರೆ.
ಈ ಉತ್ಪನ್ನಗಳಲ್ಲಿ ಹೆಚ್ಚಿನವು ಕಫ್ ಸಿರಪ್, ಪ್ಯಾರಾಸಿಟಮಾಲ್ ಹಾಗೂ ವಿಟಮಿನ್ ಉತ್ಪನ್ನಗಳಾಗಿವೆ. ಇವುಗಳಲ್ಲಿ 7 ಕಫ್ ಸಿರಪ್‌ಗಳು ಭಾರತ ಹರ್ಯಾಣದಲ್ಲಿ ಉತ್ಪಾದನೆಯಾಗುತ್ತಿವೆ. ಇಲ್ಲಿನ ಮೈಡೆನ್ ಫಾರ್ಮಾಸ್ಯುಟಿಕಲ್, ಮೇರಿಯನ್ ಬಯೋಟೆಕ್, ಪಂಜಾಬ್‌ನ ಫರ್ಮಾಚೆಂಗಳು ಇವುಗಳನ್ನು ಉತ್ಪಾದಿಸುತ್ತಿವೆ. ಉಳಿದವು ಇಂಡೋನೇಷ್ಯಾದವು.
ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್‌ನಲ್ಲಿ 15 ಔಷಧಿಗಳ ಕುರಿತು ʼವೈದ್ಯಕೀಯ ಉತ್ಪನ್ನ ಎಚ್ಚರಿಕೆʼಗಳನ್ನು ನೀಡಿದೆ. ಅಲ್ಲಿ ಭಾರತೀಯ ನಿರ್ಮಿತ ಸಿರಪ್‌ಗಳು ಕಳೆದ ವರ್ಷ ಕನಿಷ್ಠ 88 ಸಾವುಗಳಿಗೆ ಕಾರಣವಾಗಿವೆ. ಮೈಕ್ರೋನೇಷಿಯಾ ಮತ್ತು ಮಾರ್ಷಲ್ ದ್ವೀಪಗಳಲ್ಲಿ ಇಂಡೋನೇಷ್ಯಾದ ಉತ್ಪನ್ನಗಳ ಬಗ್ಗೆ ಎಚ್ಚರಿಕೆ ಮೂಡಿಸಲಾಗಿದೆ. ಅಲ್ಲಿ ಮಾರಾಟವಾದ ಸಿರಪ್‌ಗಳು 200ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗಿವೆ.
ಈ ಜೂನ್‌ನ ಆರಂಭದಲ್ಲಿ, ಲೈಬೀರಿಯಾದಲ್ಲಿ ಮಾರಾಟವಾದ ಪ್ಯಾರಸಿಟಮಾಲ್ ಸಿರಪ್ ಡೈಥೈಲಿನ್ ಗ್ಲೈಕೋಲ್ ಅಥವಾ ಎಥಿಲೀನ್ ಗ್ಲೈಕೋಲ್‌ನೊಂದಿಗೆ ಕಲುಷಿತಗೊಂಡಿರುವುದನ್ನು ಗಮನಿಸಿದ ನೈಜೀರಿಯನ್ ಡ್ರಗ್ ಕಂಟ್ರೋಲರ್ ಎಚ್ಚರಿಕೆಯನ್ನು ನೀಡಿದೆ. ಮುಂಬೈ ಮೂಲದ ಕಂಪನಿಯೊಂದು ಈ ಸಿರಪ್ ತಯಾರಿಸಿದೆ.
ಇದನ್ನೂ ಓದಿ: Cough Syrup: 18 ಮಕ್ಕಳ ಸಾವಿಗೆ ಕಾರಣವಾದ ಕಪ್ ಸಿರಪ್ ಕಂಪನಿಯ ಮೂವರ ಬಂಧನ