ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮಳೆ ಶುರುವಾಗಿದೆ. ಅಧಿಕೃತವಾಗಿ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಳೆ ಹದವಾಗಿ ಸುರಿದರೆ ಚಂದ. ಆದರೆ ಕಳೆದ ಹಲವಾರು ವರ್ಷಗಳಿಂದ ಮಳೆಯ ಪ್ರಮಾಣದಲ್ಲಿ ಏರಿಳಿತ ಕಾಣುತ್ತಲೇ ಇದೆ. ಹಲವೆಡೆ ಹೆಚ್ಚಾಗಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾದರೆ, ಇನ್ನು ಕೆಲವೆಡೆ ಮಳೆಯಿಲ್ಲದೆ ಬರ ಕಾಡಿದೆ. ಈ ಎರಡೂ ಪರಿಸ್ಥಿತಿಗೆ ನಾವು ಸಿದ್ಧವಿರಬೇಕಾಗುತ್ತಿದೆ. ಹಾಗಾದರೆ ಈ ಪ್ರವಾಹ ಪರಿಸ್ಥಿತಿ ಬಂದಾಗ ಯಾವ ರೀತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು? ಈ ರೀತಿಯ ಪ್ರಶ್ನೆಗಳಿಗೆ ಇಲ್ಲಿವೆ ಕೆಲವು (Monsoon Flood Safety Tips) ಸಲಹೆ.
ಇದನ್ನೂ ಓದಿ: Goods Train Derails: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್ಪಿಜಿ ಸಾಗಿಸುತ್ತಿದ್ದ ರೈಲು; ಯಾರನ್ನು ‘ಹಳಿ’ಯಬೇಕು?
ಪ್ರವಾಹಕ್ಕೂ ಮೊದಲು ಮಾಡಿಕೊಳ್ಳಬೇಕಾದ ಸಿದ್ಧತೆಗಳು:
- ಕೊಳೆಯದಂತಹ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳಿ. ಹಾಗೆಯೇ ಕನಿಷ್ಠ ಮೂರು ದಿನಗಳಿಗೆ ಬೇಕಾಗುವಷ್ಟು ನೀರನ್ನೂ ಸಂಗ್ರಹ ಮಾಡಿಟ್ಟುಕೊಳ್ಳಿ.
- ದೂರದರ್ಶನ ಮತ್ತು ರೇಡಿಯೋಗಳಲ್ಲಿ ನಿಮ್ಮ ಸ್ಥಳೀಯ ಸುದ್ದಿಗಳ ಬಗ್ಗೆ ಗಮನ ಹರಿಸಿ. ಸ್ಥಳೀಯವಾಗಿ ಮಳೆ ಪ್ರಮಾಣ, ಮುನ್ನೆಚ್ಚರಿಕೆಗಳ ಬಗ್ಗೆ ಕೇಳಿಕೊಳ್ಳಿ.
- ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆ ಮತ್ತು ಇತರ ಮಹತ್ವದ ದಾಖಲೆಗಳನ್ನು ವಾಟರ್ ಪ್ರೂಫ್ ಕವರ್ ಅಥವಾ ಬಾಕ್ಸ್ನಲ್ಲಿ ಭದ್ರವಾಗಿಟ್ಟುಕೊಳ್ಳಿ.
- ಮನೆಯ ಹೊರಾಂಗಣದಲ್ಲಿ ಇರಿಸಲಾಗಿರುವ ಪೀಠೋಪಕರಣಗಳು, ಸಾಮಗ್ರಿಗಳನ್ನು ಮನೆಯ ಒಳಗೆ ತಂದಿಡಿ. ಹಾಗೆಯೇ ಎಲ್ಲ ಪೀಠೋಪಕರಣುಗಳು, ಸಾಮಗ್ರಿಗಳನ್ನು ಹಗ್ಗದಲ್ಲಿ ಕಟ್ಟಿ ನೀರಿನಲ್ಲಿ ಹರಿದು ಹೋಗದಂತೆ ಜೋಪಾನ ಮಾಡಿಟ್ಟುಕೊಳ್ಳಿ.
- ಒಂದು ವೇಳೆ ನೀವಿರುವ ಸ್ಥಳ ಸುರಕ್ಷಿತವಲ್ಲ ಎಂದು ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದಾದರೆ ಮನೆಯ ಎಲ್ಲ ಪವರ್ ಸ್ವಿಚ್ಗಳನ್ನು ಆಫ್ ಮಾಡಿ. ಹಾಗೆಯೇ ಗ್ಯಾಸ್ ಸಿಲಿಂಡರ್ ಅನ್ನು ಆಫ್ ಮಾಡುವುದಕ್ಕೆ ಮರೆಯದಿರಿ.
- ನಿಮ್ಮ ಮನೆ ತಗ್ಗು ಪ್ರದೇಶ ಅಥವಾ ಕಣಿವೆ ಪ್ರದೇಶದಲ್ಲಿದ್ದರೆ ಪ್ರವಾಹ ಉಂಟಾಗುವುದಕ್ಕೆ ಮೊದಲೇ ಮನೆ ಬಿಟ್ಟು ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳಿ.
- ಪ್ರವಾಹ ಉಂಟಾದಾಗ ಸ್ಥಳೀಯ ಪಾಲಿಕೆ ಅಥವಾ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸಂಪರ್ಕಿಸಿ ನೆರವು ಪಡೆಯಿರಿ.
ಪ್ರವಾಹ ಸಂಭವಿಸಿದ ನಂತರ ಏನು ಮಾಡಬೇಕು?
- ಪ್ರವಾಹ ಉಂಟಾದಾಗ ಹರಿಯುವ ನೀರು ಅಥವಾ ನಿಂತಿರುವ ನೀರಿನಲ್ಲಿ ವಾಹನ ಚಲಾಯಿಸುವ ದುಸ್ಸಾಹಸ ಮಾಡಬೇಡಿ. ಹೀಗೆ ಮಾಡಿದರೆ ನೀವೂ ನೀರಿನಲ್ಲಿ ತೇಲಿ ಹೋಗಬಹುದು ಅಥವಾ ವಾಹನ ಸಮೇತವಾಗಿ ಮುಳುಗಡೆ ಆಗಬಹುದು.
- ಮನೆಗೆ ನೀರು ನುಗ್ಗಿದೆ, ಕುಡಿಯುವುಕ್ಕೆ ನೀರಿಲ್ಲವೆಂದು ಪ್ರವಾಹದಲ್ಲಿ ಬಂದ ನೀರನ್ನೇ ಕುಡಿಯಲು ಹೋಗಬೇಡಿ. ಅಥವಾ ಅದನ್ನು ಬಳಸಿಕೊಂಡು ಅಡುಗೆ ಮಾಡುವುದಾಗಲೀ, ಸ್ನಾನ ಮಾಡುವುದಾಗಲೀ ಮಾಡಬೇಡಿ.
- ಒಂದು ವೇಳೆ ನೀವು ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ ನಿಮ್ಮ ಮನೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ನಂತರವೇ ಮನೆಗೆ ಮರಳುವ ಬಗ್ಗೆ ನಿರ್ಧಾರ ಮಾಡಿ.
- ಪ್ರವಾಹದಲ್ಲಿ ತೇಲಿ ಬಂದ ವಸ್ತುಗಳನ್ನು ಬಳಕೆ ಮಾಡುವುದಕ್ಕೆ ಹೋಗಬೇಡಿ. ಪ್ರವಾಹದಲ್ಲಿ ಬರುವ ವಸ್ತುಗಳಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿರುತ್ತದೆ.
- ಪ್ರವಾಹ ನಿಂತ ನಂತರ ಪೂರ್ತಿ ಮನೆಯನ್ನು ಸ್ವಚ್ಛ ಮಾಡಿ. ಸ್ವಚ್ಛ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಹಾಸಿಗೆ, ಹೊದಿಕೆಗಳನ್ನು ಎಸೆಯಿರಿ.