ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಹಾಗೆಯೇ, ಮಹಾರಾಷ್ಟ್ರದ ಕಸ್ಬಾ ಪೇಠ್ ಮತ್ತು ಚಿಂಚವಾಡ ವಿಧಾನಸಭೆ ಕ್ಷೇತ್ರ, ತಮಿಳುನಾಡಿನ ಈರೋಡ್, ಪಶ್ಚಿಮ ಬಂಗಾಳದ ಸಾಗರ್‌ದಿಘಿ, ಜಾರ್ಖಂಡ್‌ನ ರಾಮಗಢ ಹಾಗೂಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವೂ ಗುರುವಾರ ಪ್ರಕಟವಾಗಲಿದೆ.
ಫೆಬ್ರವರಿ 16ರಂದು ತ್ರಿಪುರದಲ್ಲಿ, ಫೆಬ್ರವರಿ 27ರಂದು ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಚುನಾವಣೆ ನಡೆದಿತ್ತು. ತ್ರಿಪುರದಲ್ಲಿ ಶೇ.87.6, ಮೇಘಾಲಯದಲ್ಲಿ 76.27 ಹಾಗೂ ನಾಗಾಲ್ಯಾಂಡ್‌ನಲ್ಲಿ ಶೇ.84.08ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ತ್ರಿವಳಿ ರಾಜ್ಯಗಳ ಚುನಾವಣೆ ಫಲಿತಾಂಶ ನಿಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಸುಗಮ ಮತ ಎಣಿಕೆಗೆ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.
ತ್ರಿಪುರದಲ್ಲಿ ಯಾರಿಗೆ ಗೆಲುವು?
ತ್ರಿಪುರ ವಿಧಾನಸಭೆಯ ಒಟ್ಟು 60 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 31 ಮ್ಯಾಜಿಕ್ ಜಂಬರ್ ಆಗಿದೆ. ಆಡಳಿತಾರೂಢ ಬಿಜೆಪಿ, ಮೈತ್ರಿಪಕ್ಷ ಐಪಿಎಫ್‌ಟಿ ಹಾಗೂ ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿಯ ಕದನವು ಕುತೂಹಲ ಕೆರಳಿಸಿದೆ. ಇದರ ಮಧ್ಯೆ, ಟಿಐಪಿಆರ್‌ಎ ಮೋಥಾ ಎಂಬ ಪ್ರಾದೇಶಿಕ ಪಕ್ಷವೂ ಪ್ರಬಲವಾಗಿದ್ದು, ತ್ರಿಕೋನ ಕದನದಲ್ಲಿ ಯಾರಿಗೆ ಜಯ ಎಂಬ ಕುತೂಹಲ ಮೂಡಿದೆ.
2018ರ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಸ್ಥಾನ
ಬಿಜೆಪಿ 36
ಸಿಪಿಎಂ 16
ಐಪಿಎಫ್‌ಟಿ 08
ಮೇಘಾಲಯದಲ್ಲಿ ಚತುಷ್ಕೋನ ಸ್ಪರ್ಧೆ
ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಬಿಜೆಪಿಯು ಆಡಳಿತಾರೂಢ ಮೈತ್ರಿ (ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್) ಪಕ್ಷದ ಸದಸ್ಯವಾದರೂ ಇಲ್ಲಿ ಪ್ರಾಬಲ್ಯವಿಲ್ಲ. ನ್ಯಾಷನಲ್ ಪೀಪಲ್ಸ್ ಪಕ್ಷದ ಕಾನ್ರಾಡ್ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಹಾಗೂ ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ಇದೆ. ಯಾವುದೇ ಚುನಾವಣೆಪೂರ್ವ ಮೈತ್ರಿ ಇಲ್ಲದೆ ನಾಲ್ಕು ಪಕ್ಷಗಳ ಮಧ್ಯೆ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬೃಹತ್ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಆಗದ ಕಾಂಗ್ರೆಸ್ ಈ ಬಾರಿ ಗೆದ್ದೇ ತೀರುವ ವಿಶ್ವಾಸದಲ್ಲಿದೆ. ಇಲ್ಲೂ 60 ಕ್ಷೇತ್ರಗಳಿದ್ದು, 31 ಮ್ಯಾಜಿಕ್ ನಂಬರ್.
2018ರ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಸ್ಥಾನ
ಕಾಂಗ್ರೆಸ್ 21
ಎನ್‌ಪಿಪಿ 20
ಬಿಜೆಪಿ 02
ಇತರೆ 07
ನಾಗಾಲ್ಯಾಂಡ್‌ನಲ್ಲಿ ಯಾವ ಪಕ್ಷ ಕಿಂಗ್?
ಈಶಾನ್ಯದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಇದೆ. ಅದರಂತೆ, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಕ್ಷ (NDPP)ದ ನೆಫಿಯು ರಿಯೋ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ವೈ. ಪ್ಯಾಟ್ಟೊನ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಬಾರಿ ಹೆಚ್ಚು ಸ್ಥಾನ ಗೆದ್ದ ಪಕ್ಷ ಎನಿಸಿದರೂ ಸರ್ಕಾರ ರಚಿಸಲು ಆಗದ ನಾಗಾ ಪೀಪಲ್ಸ್ ಫ್ರಂಟ್ ಈ ಬಾರಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ 31 ಆಗಿದೆ.
2018ರ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಸ್ಥಾನ
ಎನ್‌ಪಿಎಫ್ 26
ಬಿಜೆಪಿ 12
ಇತರೆ 22
ಚುನಾವಣೋತ್ತರ ಸಮೀಕ್ಷಾ ವರದಿಯ ಮಾಹಿತಿ
ಇದನ್ನೂ ಓದಿ: Exit Polls: ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌ಪಿಪಿ, ನಾಗಾಲ್ಯಾಂಡ್ ಎನ್‌ಡಿಪಿಗೆ ಅಧಿಕಾರ