ತಿರುವನಂತಪುರಂ: ಪ್ರೀತಿಗೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ. ಯುವಕ-ಯುವತಿಯ ಮನಸ್ಸು ಒಂದಾದರೆ, ಜಾತಿ, ಧರ್ಮ, ಹಣ, ಆಸ್ತಿ, ಅಂತಸ್ತಿನ ಲೆಕ್ಕವೇ ಇಲ್ಲ. ಇಂತಹ ಔದಾರ್ಯದ ಆದರ್ಶವನ್ನು ಕೇರಳ ಸರ್ಕಾರ ಅಳವಡಿಸಿಕೊಂಡಿದೆ. ವಿವಾಹ ನೋಂದಣಿ ಕಚೇರಿಗಳಲ್ಲಿ ರಿಜಿಸ್ಟರ್ ಮ್ಯಾರೇಜ್ (Marriage Registration) ಆಗುವವರ ಜಾತಿ, ಧರ್ಮವನ್ನು ಕೇಳುವಂತಿಲ್ಲ ಎಂದು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಆದೇಶ ಹೊರಡಿಸಿದೆ.
ಹೌದು, ಕೇರಳ ಸರ್ಕಾರವು ಈ ಕುರಿತು ಎಲ್ಲ ಸ್ಥಳೀಯ ಸಂಸ್ಥೆಗಳ ರಿಜಿಸ್ಟ್ರಾರ್‌ಗಳಿಗೆ ಆದೇಶ ಹೊರಡಿಸಿದೆ. ವಿವಾಹ ನೋಂದಣಿ ಮಾಡಿಸಿಕೊಳ್ಳಲು ಬರುವವರಿಗೆ ಅವರ ಜಾತಿ, ಧರ್ಮದ ಮಾಹಿತಿ ಕೇಳುವಂತಿಲ್ಲ. ವಿವಾಹ ಪ್ರಮಾಣಪತ್ರಗಳಲ್ಲೂ ಧರ್ಮದ ಕುರಿತು ಉಲ್ಲೇಖಿಸುವಂತಿಲ್ಲ ಎಂದು ಲೋಕಲ್ ಸೆಲ್ಫ್-ಗವರ್ನಮೆಂಟ್ ಡಿಪಾರ್ಟ್‌ಮೆಂಟ್ ಸುತ್ತೋಲೆ ಹೊರಡಿಸಿದೆ.
ದಂಪತಿಯ ಧರ್ಮದ ಕುರಿತು ನೋಂದಣಾಧಿಕಾರಿಗಳು ಪ್ರಮಾಣಪತ್ರವನ್ನು ಕೂಡ ಕೇಳಬಾರದು. ದಂಪತಿಯ ಜನನದ ಕುರಿತು ಮಾಹಿತಿ ಇರುವ ಯಾವುದಾದರೂ ದಾಖಲೆಯನ್ನು ಮಾತ್ರ ಪಡೆಯಬೇಕು. ಉಳಿದಂತೆ ಯಾವ ಮಾಹಿತಿ, ದಾಖಲೆಯನ್ನೂ ಕೇಳಬಾರದು ಎಂದು ಸೂಚಿಸಿದೆ. ಕೇರಳ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: Viral Video: ಓಡುವ ಬೈಕ್ ಮೇಲೆಯೇ ಜೋಡಿ ರೊಮ್ಯಾನ್ಸ್; ಮನೆಯಲ್ಲಿ ಏನು ಮಾಡುತ್ತೀರಿ ಅಂದ್ರು ಆಡಿಯನ್ಸ್
“ಕೇರಳ ರಿಜಿಸ್ಟ್ರೇಷನ್ ಆಫ್ ಮ್ಯಾರೇಜಸ್ (ಕಾಮನ್) ರೂಲ್ಸ್-2008ರ ಪ್ರಕಾರ ಮದುವೆಯಾಗುವ ಜೋಡಿಯ ಧರ್ಮವನ್ನು ಕೇಳಬಾರದು. ಯುವಕ ಹಾಗೂ ಯುವತಿಯ ಪೋಷಕರು ಬೇರೆ ಧರ್ಮಕ್ಕೆ ಸೇರಿದರೂ, ಪೋಷಕರ ಆಕ್ಷೇಪ ಇದ್ದರೂ, ಜೋಡಿಯು ವಿವಾಹವಾಗುವುದನ್ನು ತಡೆಯುವ, ಪ್ರಮಾಣಪತ್ರ ನಿರಾಕರಿಸುವ ಹಾಗಿಲ್ಲ” ಎಂದು 2022ರ ಅಕ್ಟೋಬರ್ 12ರಂದು ಕೇರಳ ಹೈಕೋರ್ಟ್ ಆದೇಶಿಸಿತ್ತು. ಅದರಂತೆ, ಕೇರಳ ಸರ್ಕಾರವು ಈಗ ಸುತ್ತೋಲೆ ಹೊರಡಿಸಿದೆ. ಕೇರಳ ಸರ್ಕಾರದ ತೀರ್ಮಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ