ವಾರಾಣಸಿ: ಭಾರಿ ಕುತೂಹಲಕ್ಕೆ ಕಾರಣವಾಗಿರುವ ವಾರಣಾಸಿಯ ಜ್ಞಾನವಾಪಿ ಮಸೀದಿ ಸರ್ವೆ ವರದಿ ಸಲ್ಲಿಕೆಗೆ ಸ್ಥಳೀಯ ಕೋರ್ಟ್ ಇನ್ನೂ ಎರಡು ದಿನಗಳ ಕಾಲಾವಕಾಶ ನೀಡಿದೆ. ಈ ಹಿಂದಿನ ಸೂಚನೆಯ ಪ್ರಕಾರ ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರು ಮಂಗಳವಾರವೇ ತಮ್ಮ ವರದಿಯನ್ನು ಸಲ್ಲಿಸಬೇಕಾಗಿತ್ತು. ಸೋಮವಾರವಷ್ಟೇ ಸರ್ವೆ ಮುಗಿದಿದ್ದು, ಕೆಲವೊಂದು ಮಹತ್ವದ ಮಾಹಿತಿಗಳನ್ನು ಅಡಕಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಸಮಯಾವಕಾಶ ಬೇಕು ಎಂದು ಕೇಳಿದ ಹಿನ್ನೆಲೆಯಲ್ಲಿ ಕೋರ್ಟ್ ಅವಕಾಶ ನೀಡಿದೆ.
ಶನಿವಾರ, ಭಾನುವಾರ ಮತ್ತು ಸೋಮವಾರ ಜ್ಞಾನವಾಪಿ ಮಸೀದಿ ಆವರಣದಲ್ಲಿ ವಿಡಿಯೊಗ್ರಫಿ ಸಮೀಕ್ಷೆ ನಡೆದಿದೆ. ಈ ವೇಳೆ ಸರ್ವೆಯ ಮೂರನೇ ದಿನ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆಗೆ ಮುನ್ನ ಶುಚೀಕರಣ ಪ್ರಕ್ರಿಯೆ ನಡೆಸುವ ವಾಜುಖಾನಾ ಪ್ರದೇಶದಲ್ಲಿ ಶಿವಲಿಂಗ ಕಂಡು ಬಂದ ಬಳಿಕ ಒಟ್ಟಾರೆ ಚಿತ್ರಣವೇ ಬದಲಾಗಿದೆ. ಕೊಳದಲ್ಲಿನ ನೀರನ್ನು ಬರಿದುಗೊಳಿಸಿದ ಬಳಿಕ ತಳದಲ್ಲಿ ಈ ನಿರ್ಮಾಣ ಕಂಡುಬಂದಿದೆ. ಇದನ್ನು ಹಿಂದೂಗಳ ಪರ ವಕೀಲರು ಶಿವಲಿಂಗ ಎಂದರೆ, ಮುಸ್ಲಿಮರ ಪರ ಇರುವವರು ಕಾರಂಜಿ ಎನ್ನುತ್ತಿದ್ದಾರೆ. ಇದರ ನಡುವೆಯೇ ಸ್ಥಳೀಯ ಕೋರ್ಟ್ ಈ ಪ್ರದೇಶಕ್ಕೆ ಯಾರೂ ಹೋಗದಂತೆ ನಿರ್ಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಸೂಚಿಸಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಅವಕಾಶ ನೀಡಿದ ಕೋರ್ಟ್
ಸ್ಪೆಷಲ್ ಅಡ್ವೊಕೇಟ್ ಕಮಿಷನರ್ ಆಗಿರುವ ವಿಶಾಲ್ ಸಿಂಗ್ ಅವರು ಕೋರ್ಟ್ ಮುಂದೆ ಹಾಜರಾಗಿ ವರದಿ ಸಲ್ಲಿಸಲು ಎರಡು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು. ಈಗ ವಿಡಿಯೊ ಚಿತ್ರೀಕರಣ ಆಗಿದೆ. ಅದರಲ್ಲಿರುವ ಅಂಶಗಳನ್ನು ಗಮನಿಸಿ ವರದಿ ತಯಾರಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರ್ಟ್ಗೆ ವಿನಂತಿಸಲಾಯಿತು. ಇದನ್ನು ಪರಿಗಣಿಸಿ ಕೋರ್ಟ್ ಸಮಯಾವಕಾಶ ನೀಡಿದೆ.
Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ
ಮಹತ್ವದ ದಾಖಲೆ
ಕೋರ್ಟ್ ಕಮಿಷನರ್ ನೀಡುವ ವರದಿ ಜ್ಞಾನವಾಪಿ ಮಸೀದಿ ವಿವಾದದ ಭವಿಷ್ಯದಲ್ಲಿ ಮಹತ್ವದ ದಾಖಲೆಯಾಗಲಿದೆ. ಜ್ಞಾನವಾಪಿ ಮಸೀದಿ ಆವರಣದ ಗೋಡೆಯಲ್ಲಿರುವ ದೇವರ ಚಿತ್ರಗಳಿಗೆ ಪೂಜೆ ಮಾಡಲು ಅವಕಾಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸುವುದರೊಂದಿಗೆ ಆರಂಭವಾಗಿರುವ ಈ ಕೋರ್ಟ್ ಹೋರಾಟ ಈ ವಿವಾದಕ್ಕೆ ತಾತ್ವಿಕ ಅಂತ್ಯವನ್ನು ಒದಗಿಸುವ ಹಂತಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿದೆ.
ಆರಂಭಿಕ ಹಂತದಲ್ಲಿ ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವ ಆದೇಶವನ್ನೇ ಜ್ಞಾನವಾಪಿ ಆಡಳಿತ ಮಂಡಳಿ ವಿರೋಧಿಸಿತ್ತು. ಆದರೆ, ಸ್ಥಳೀಯ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಾಗ ಸರ್ವೆಗೆ ಒಪ್ಪಿಕೊಂಡು ಸಹಕರಿಸಿದೆ.
ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್ ಮಾಡಿ ಎಂದ ಕೋರ್ಟ್
ಸಾಕಷ್ಟು ಸಾಕ್ಷ್ಯ ಲಭ್ಯ?
ಜ್ಞಾನವಾಪಿ ಮಸೀದಿ ಆವರಣದ ಪಶ್ಚಿಮ ಗೋಡೆ, ನೆಲಮಹಡಿಯಲ್ಲಿರುವ ಕೋಣೆಗಳ ಸರ್ವೆ ವೇಳೆ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ ಎಂದು ಹೇಳಲಾಗಿದೆ. ಹಲವಾರು ದೇವರ ಚಿತ್ರಗಳು ಗೋಡೆಯಲ್ಲಿದ್ದರೆ, ಇನ್ನು ಕೆಲವು ಸಂಕೇತಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನ ಸೆಳೆದಿರುವುದು ಕೊಳದಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗ. ದೇವಾಲಯ ಧ್ವಂಸದ ಸಂದರ್ಭದಲ್ಲಿ ಅರ್ಚಕರು ಶಿವಲಿಂಗವನ್ನು ಬಾವಿಗೆ ಹಾಕಿದ್ದರು ಎಂಬುದಾಗಿ ಹೇಳಲಾಗುತ್ತಿತ್ತು. ಅದಕ್ಕೂ ಈಗ ಪತ್ತೆಯಾಗಿರುವ ಶಿವಲಿಂಗಕ್ಕೂ ತಾಳೆ ಹಾಕಲಾಗುತ್ತಿದೆ. ಈ ಶಿವಲಿಂಗಕ್ಕೆ ಅಭಿಮುಖವಾಗಿರುವ ನಂದಿ ವಿಗ್ರಹ ಈಶ್ವರನಿಗಾಗಿ ಕಾಯುತ್ತಿದೆ ಎಂಬ ಪ್ರತೀತಿ ಇದೆ.
ಹೀಗಾಗಿ ಶಿವಲಿಂಗ ಪತ್ತೆ ಎನ್ನುವುದು ಹಿಂದೂಗಳ ನಂಬಿಕೆಗೆ ಸರಿಯಾಗಿಯೇ ಇದೆ ಎಂಬ ಚರ್ಚೆ ಇದೆ. ಆದರೂ ಕೋರ್ಟ್ ಕಮೀಷನರ್ ಕೋರ್ಟ್ಗೆ ನೀಡುವ ದಾಖಲೆ, ಕೊಡುವ ಚಿತ್ರಗಳು ಹೇಗಿರುತ್ತವೆ ಎನ್ನುವುದರ ಆಧಾರದ ಮೇಲೆ ಮುಂದಿನ ಸಂಗತಿಗಳು ನಿರ್ಧಾರವಾಗಲಿವೆ.