Site icon Vistara News

ವರವರ ರಾವ್‌ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್‌

ಬೆಂಗಳೂರು: ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಗಲಭೆಯ ಆರೋಪಿಗಳಲ್ಲೊಬ್ಬರಾದ ವರವರ ರಾವ್‌ ಶಾಶ್ವತ ಜಾಮೀನನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿದ್ದು, ಆರೋಪಿಗಳು ಜಾಮೀನು ಪಡೆಯಲು ವೈದ್ಯಕೀಯ ನೆಪ ಹೇಳದಂತೆ ಜೈಲಿನ ಪರಿಸ್ಥಿತಿ ಸುಧಾರಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

2018ರ ಜನವರಿ 1ರಂದು ಭೀಮಾ ಕೋರೆಗಾಂವ್‌ನಲ್ಲಿ ಗಲಭೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ವರವರ ರಾವ್‌ ಸೇರಿ ಅನೇಕರನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ದಳ(NIA) ಈ ಪ್ರಕರಣದ ತನಿಖೆ ನಡೆಸುತ್ತಿದೆ. ತಮಗೆ ಅನೇಕ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿ ವರವರ ರಾವ್‌ ಈಗಾಗಲೆ ತಾತ್ಕಾಲಿಕ ಜಾಮೀನಿನಲ್ಲಿದ್ದಾರೆ.

ಫೆಬ್ರವರಿ 22ರಂದು ನೀಡಿದ ತಾತ್ಕಾಲಿಕ ಜಾಮೀನನ್ನು ಮರುಪರಿಶೀಲಿಸಿ, ವರವರ ರಾವ್‌ ಅವರು ತಮ್ಮ ಕುಟುಂಬದೊಂದಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರ್ಚ್‌ 21ರಂದು ತೀರ್ಪನ್ನು ಕಾಯ್ದಿರಿಸಿತ್ತು, ಏಪ್ರಿಲ್‌ 13ರಂದು ಘೋಷಿಸಿತ್ತು. ಇದೀಗ 33 ಪುಟಗಳ ಆದೇಶ ಪ್ರತಿಯನ್ನು ಏಪ್ರಿಲ್‌ 22ರಂದು ಲಭ್ಯವಾಗಿಸಲಾಗಿದೆ.

ರಾವ್‌ ಪರ ವಕೀಲರಾದ ಆನಂದ್‌ ಗ್ರೋವರ್‌ ಅವರು ವಾದ ಮಂಡಿಸಿದಂತೆ, ರಾವ್‌ ಆರಂಭಿಕ ಪಾರ್ಕಿನ್ಸನ್‌ ಗುಣಲಕ್ಷಣ ತೋರುತ್ತಿದ್ದಾರೆ. ಜ್ಞಾಪಕ ಶಕ್ತಿ ಕುಗ್ಗುತ್ತಿದೆ, ಚಲಿಸಲು ಸಮಸ್ಯೆಯಿದೆ. ಮೆದುಳಿನಲ್ಲೂ ಸಮಸ್ಯೆಯಿದ್ದು, ಡಿಮೆನ್ಷಿಯಾದಿಂದ ಬಳಲುತ್ತಿದ್ದಾರೆ. ವಯಸ್ಸು ಹೆಚ್ಚಾಗಿರುವ ಕಾರಣದಿಂದಾಗಿ, ಜೈಲಿನಲ್ಲಿರುವ ವ್ಯವಸ್ಥೆಯಲ್ಲಿ ಬದುಕುಳಿಯುವುದು ಕಬಹು ಕಷ್ಟಕರ ಎಂದು ವಾದಿಸಿದ್ದರು. ರಾವ್‌ರನ್ನು ಬಂಧಿಸಲಾಗಿದ್ದ ತಲೋಜಾ ಜೈಲಿನಲ್ಲಿ ನಿಯಮಾನುಸಾರ ತರಬೇತಿ ಪಡೆದ ವೈದ್ಯಾಧಿಕಾರಿಗಳಿಲ್ಲ, ದಾದಿಯರಿಲ್ಲ ಹಾಗೂ ಮೂಲಸೌಕರ್ಯಗಳಿಲ್ಲ ಎಂದಿದ್ದರು.

ಆದರೆ 82 ವರ್ಷದ ವರವರ ರಾವ್‌ ಕುರಿತು ಸರ್ಕಾರದ ವತಿಯಿಂದ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ವ್ಯತಿರಿಕ್ತ ವರದಿ ಬಂದಿತ್ತು. ಈ ಅಂಶವನ್ನು ತಮ್ಮ ತೀರ್ಪಿನಲ್ಲಿ ಪ್ರಸ್ತಾಪಿಸಿರುವ ನ್ಯಾಯಮೂರ್ತಿ ಎಸ್‌.ಬಿ. ಶುಕ್ರೆ ಹಾಗೂ ಜಿ.ಎ. ಸನಪ್‌ ಅವರು, ವೈದ್ಯಕೀಯ ವರದಿಗೂ ಆರೋಪಿ ಕೋರಿಕೆಗೂ ತಾಳೆಯಾಗುತ್ತಿಲ್ಲ. ತಮ್ಮ ಬೇಡಿಕೆಗೆ ವರದಿ ಇಲ್ಲ ಎಂಬ ಕಾರಣಕ್ಕೆ ಅದನ್ನು ಆರೋಪಿ ವಿರೋಧಿಸುವುದು ಸಹಜವಾಗಿದೆ. ಆದರೆ ಈ ವರದಿಯನ್ನು ನೀಡಿರುವ ಎಲ್ಲ ತಜ್ಞ ವೈದ್ಯರೂ ಎನ್‌ಐಎ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಲು ನಮಗೆ ಎಳ್ಳಷ್ಟೂ ಸಾಕ್ಷಿ ಸಿಕ್ಕಿಲ್ಲ” ಎಂದಿದ್ದಾರೆ.

“ವರವರ ರಾವ್‌ ಮೇಲಿನ ಆರೋಪದ ಗಂಭೀರತೆ ಇನ್ನೂ ಹಾಗೆಯೇ ಇದೆ” ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಶಾಶ್ವತ ಜಾಮೀನನ್ನು ನಿರಾಕರಿಸಿದೆ. ಸದ್ಯದ ತಾತ್ಕಾಲಿಕ ಜಾಮೀನು ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ. ತಲೋಜಾ ಜೈಲು ಸೇರಿ ಮಹಾರಾಷ್ಟ್ರದ ಎಲ್ಲ ಜೈಲುಗಳಲ್ಲೂ ಜೈಲು ನಿಯಮಾವಳಿಗಳಿಗೆ ಅನುಗುಣವಾಗಿ ಸೌಲಭ್ಯ ಇದೆಯೇ ಎನ್ನುವುದನ್ನು ಪರಿಶೀಲಿಸಿ ಮಾಹಿತಿ ಪಡೆಯಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ. ಏಪ್ರಿಲ್‌ 30ರೊಳಗೆ ಇದರ ವರದಿಯನ್ನು ಸಲ್ಲಿಸಲು ತಿಳಿಸಿದೆ. “ಜೈಲಿನಲ್ಲಿ ವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ ಎಲ್ಲ ಆರೋಪಿಗಳೂ ಇದೇ ವೈದ್ಯಕೀಯ ಆಧಾರದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Exit mobile version