Site icon Vistara News

Mann Ki Baat | ಹಲವು ದೇಶಗಳಲ್ಲಿ ಕೋವಿಡ್‌ ಕೇಸ್‌ ಏರಿಕೆ, ಇರಲಿ ಮುನ್ನೆಚ್ಚರ : ಪ್ರಧಾನಿ ನರೇಂದ್ರ ಮೋದಿ

BJP Big Plan Narendra Modi's Mann Ki Baat 100th episode to broadcast worldwide

ನವ ದೆಹಲಿ: ನಾನಾ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನಲ್ಲಿ ತಿಳಿಸಿದ್ದಾರೆ. ಹಬ್ಬ ಹರಿದಿನಗಳನ್ನು ಆಚರಿಸಿ, ಆಸದರೆ ಜತೆಗೆ ಮುಂಜಾಗರೂಕತಾ ಕ್ರಮಗಳನ್ನೂ ಸರಿಯಾಗಿ ಪಾಲಿಸಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಈ ವರ್ಷದ ಕೊನೆಯ ಮನ್‌ ಕಿ ಬಾತ್‌ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಮಾಸ್ಕ್‌ಗಳನ್ನು ಧರಿಸಬೇಕು, ಕೈಗಳನ್ನು ತೊಳೆದುಕೊಳ್ಳಬೇಕು ಎಂದು ತಿಳಿಸಿದರು.

2022ರಲ್ಲಿ ಭಾರತ 5ನೇ ದೊಡ್ಡ ಆರ್ಥಿಕತೆ:

ಈ 2022ರ ವರ್ಷ ಭಾರತದ ಪಾಲಿಗೆ ಅದ್ಭುತವಾಗಿತ್ತು. ಭಾರತ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಜಿ20 ಶೃಂಗದ ನಾಯಕತ್ವವನ್ನು ದೇಶ ವಹಿಸಿದೆ. ಕೋವಿಡ್-‌19 ಲಸಿಕೆ ವಿತರಣೆಯಲ್ಲೂ ಭಾರತ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ದೇಶ ಅಭೂತಪೂರ್ವ ಸಾಧನೆಯನ್ನು ದಾಖಲಿಸಿದ ವರ್ಷವಿದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

2022ರಲ್ಲಿ 220 ಕೋಟಿ ಕೋವಿಡ್‌ ಲಸಿಕೆಗಳನ್ನು ವಿತರಿಸಲಾಗಿದೆ. ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌ ದೇಶವನ್ನು ಒಂದುಗೂಡಿಸುತ್ತಿದೆ. ಭಾವೈಕ್ಯದ ರಂಗನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳು ಈ ವರ್ಷ ನಡೆದಿವೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಎಲ್ಲೆಡೆಯಲ್ಲೂ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿ, ಆಚರಿಸಲಾಗಿದೆ. ಕೋಟ್ಯಂತರ ಮಂದಿ ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇವತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನವೂ ಹೌದು. ಅಟಲ್‌ಜೀಯವರ ಸಾಧನೆ ಮತ್ತು ಸಂದೇಶ ಸದಾ ದೇಶಕ್ಕೆ ಮಾರ್ಗದರ್ಶಕ. ಭಾರತ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯುವಂತಾಗಲು ಪ್ರೇರಣೆ ನೀಡಿದವರು ಅಟಲ್‌ಜೀ ಎಂದು ಪ್ರಧಾನಿ ಮೋದಿಯವರು ಸ್ಮರಿಸಿದರು.

ಆಯುರ್ವೇದ, ಯೋಗಕ್ಕೆ ಸಾರ್ವತ್ರಿಕ ಮನ್ನಣೆ:

ಭಾರತೀಯ ಆಯುರ್ವೇದ, ಯೋಗಾಭ್ಯಾಸಗಳು ಈಗ ವೈದ್ಯಕೀಯವಾಗಿಯೂ ಮನ್ನಣೆ ಗಳಿಸುತ್ತವೆ. ಆಧುನಿಕ ವೈದ್ಯಕೀಯ ಸಂಶೋಧನೆಯ ಹಂತಗಳನ್ನು ಎದುರಿಸಿ ಯಶಸ್ವಿಯಾಗುತ್ತಿವೆ. ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ದೃಢೀಕರಣಗೊಳಿಸಲು ದಿಲ್ಲಿಯ ಏಮ್ಸ್‌ ಕಳೆದ ಆರು ವರ್ಷಗಳ ಹಿಂದೆಯೇ ಪ್ರಯತ್ನ ಆರಂಭಿಸಿತ್ತು. ಈ ನಿಟ್ಟಿನಲ್ಲಿ ಸೆಂಟರ್‌ ಫಾರ್‌ ಇಂಟಿಗ್ರೇಟಿವ್ ಮೆಡಿಸಿನ್‌ ಆಂಡ್‌ ‌& ರಿಸರ್ಚ್ ಕಾರ್ಯಪ್ರವೃತ್ತವಾಗಿದೆ ಎಂದರು.

Exit mobile version