ನವ ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಜನವರಿಯಲ್ಲಿ ತೀವ್ರ ಏರಿಕೆ ಆಗಬಹುದು. ಆದರೆ ಈ ಸಲ ಕೊರೊನಾ ಗಂಭೀರ ಸ್ವರೂಪದ ರೋಗ ಲಕ್ಷಣಗಳನ್ನು ಉಂಟು ಮಾಡುವ ಮತ್ತು ಸೋಂಕಿನಿಂದ ಹೆಚ್ಚಿನ ಸಾವು ಆಗುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಈ ಹಿಂದಿನ ಕೋವಿಡ್ 19 ಅಲೆಗಳ ಸಂದರ್ಭದಲ್ಲಿ, ಕೊರೊನಾ ಸೋಂಕು ಪೂರ್ವ ಏಷ್ಯಾ ದೇಶಗಳಾದ ಚೀನಾ, ದಕ್ಷಿಣ ಕೊರಿಯಾದಲ್ಲಿ ಏರಿಕೆ ಕಂಡ 30-35 ದಿನಗಳ ನಂತರ ಭಾರತದಲ್ಲಿ ಹೆಚ್ಚಳವಾಗಿದೆ. ಚೀನಾದಲ್ಲಿ ಕಳೆದ 10 ದಿನಗಳ ಹಿಂದೆ ಕೊವಿಡ್ 19 ಸೋಂಕಿನ ಗರಿಷ್ಠ ಪ್ರಮಾಣ ದಾಖಲಾಗಿದೆ. ಈಗೀಗ ಯುಎಸ್ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಸೋಂಕಿನ ಹಬ್ಬುವಿಕೆ ಹೆಚ್ಚಳವಾಗುತ್ತಿದೆ. ಕಳೆದ ಹಿಂದಿನ ಅಲೆಗಳನ್ನು, ಭಾರತದಲ್ಲಿ ಕೊರೊನಾ ಹೆಚ್ಚಳವಾದ ದಿನಗಳನ್ನು ಲೆಕ್ಕದಲ್ಲಿಟ್ಟುಕೊಂಡು ಹೇಳುವುದಾದರೆ ಈ ಸಲ ಜನವರಿಯಲ್ಲಿ ಭಾರತದಲ್ಲಿ ಕೋವಿಡ್ 19 ಉತ್ತುಂಗಕ್ಕೇರಬಹುದು ಎಂದು ಹೇಳಲಾಗಿದೆ.
ಚೀನಾದಲ್ಲಿ ಕೊರೋನಾ ಉತ್ತುಂಗದ ಸ್ಥಿತಿಯಲ್ಲಿದ್ದರೂ ಆ ದೇಶ ಅಂತಾರಾಷ್ಟ್ರೀಯ ಸೇರಿ ಎಲ್ಲ ವಿಧದ ಪ್ರಯಾಣದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಹೀಗಾಗಿ ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಭಾರತ ಸೇರಿ ಎಲ್ಲ ದೇಶಗಳಿಗೂ ಸಹಜವಾಗಿಯೇ ಆತಂಕ ಶುರುವಾಗಿದೆ. ಭಾರತ-ಚೀನಾ ಮಧ್ಯೆ ಸದ್ಯ ನಿಯಮಿತವಾಗಿ ವಿಮಾನ ಸಂಚಾರ ಇಲ್ಲದೆ ಹೋದರೂ, ಹಾಂಗ್ಕಾಂಗ್ನಿಂದ ಆರಾಮಾಗಿ ಭಾರತಕ್ಕೆ ವಿಮಾನ ಮೂಲಕ ಬರಬಹುದಾಗಿದೆ. ಚೀನಾ ಮತ್ತು ಹಾಂಗ್ಕಾಂಗ್ ಮಧ್ಯೆ ಪ್ರವಾಸಿಗರು ಅಲ್ಲದವರು (ಪ್ರವಾಸಿಗರಿಗೆ ಪ್ರಯಾಣಕ್ಕೆ ಅವಕಾಶ ಇಲ್ಲ) ಪ್ರಯಾಣ ಮಾಡಬಹುದು ಎಂದು ಅಲ್ಲಿನ ಸರ್ಕಾರ ಆದೇಶ ನೀಡಿದೆ. ಹೀಗಾಗಿ ಪ್ರಯಾಣಿಕರು ಚೀನಾ ಮೇನ್ಲ್ಯಾಂಡ್ನಿಂದ ಹಾಂಗ್ಕಾಂಗ್ಗೆ ಬಂದು ಅಲ್ಲಿಂದ ಭಾರತಕ್ಕೆ ಬರಬಹುದು. ಇನ್ನು ಹಾಂಗ್ಕಾಂಗ್ ಮತ್ತು ಭಾರತ ಮಧ್ಯೆ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಹೀಗಾಗಿ ಆರ್ಟಿ-ಪಿಸಿಆರ್ ಟೆಸ್ಟ್ ಕಡ್ಡಾಯದಂಥ ಕ್ರಮವೇ ಅನಿವಾರ್ಯ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Coronavirus | ಚೀನಾದ ಅರ್ಧದಷ್ಟು ವೈದ್ಯರಿಗೆ ಕೊರೊನಾ ಸೋಂಕು! ಹೆಚ್ಚಿದ ಆತಂಕ