Site icon Vistara News

Cow Urine: ಗೋಮೂತ್ರ ನೇರ ಕುಡಿಯಲು ಸೂಕ್ತವಲ್ಲ, ಅದರಲ್ಲಿವೆ ಅಪಾಯಕಾರಿ ಬ್ಯಾಕ್ಟೀರಿಯಾಗಳು: ಸಂಶೋಧನಾ ವರದಿ

Cow urine is not safe for human consumption, IVRI report

ನವದೆಹಲಿ: ಗೋಮೂತ್ರವು (Gaumutra) ಮಾನವರ ನೇರ ಸೇವನೆಗೆ ಸೂಕ್ತವಲ್ಲ. ಗೋಮೂತ್ರವು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿವೆ ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾಗಿರುವ ಬರೇಲಿ ಮೂಲದ ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (IVRI – ICAR Indian Veterinary Research Institute) ಸಂಸ್ಥೆ ವರದಿ ಹೇಳಿದೆ. ಭಾರತೀಯ ಸಂಸ್ಕೃತಿಯಲ್ಲಿ ಗೋಮೂತ್ರಕ್ಕೆ (Cow Urine) ವಿಶೇಷ ಸ್ಥಾನವಿದೆ. ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಲಾಗಿದೆ. ಆದರೆ, ಈಗ ಪ್ರಕಟವಾಗಿರುವ ಸಂಶೋಧನಾ ವರದಿಯು ಜನರ ನಂಬಿಕೆಗೆ ಪ್ರಹಾರ ಮಾಡುವ ಸಾಧ್ಯತೆಗಳಿದ್ದು, ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಲ್ಲಿ ಈ ಸತ್ಯವನ್ನು ಕಂಡುಕೊಳ್ಳಲಾಗಿದೆ. ಅಧ್ಯಯನಕ್ಕಾಗಿ ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಮಾದರಿಗಳಲ್ಲಿ ಕನಿಷ್ಠ 14 ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಹೊಟ್ಟೆಯ ಸೋಂಕನ್ನು ಉಂಟುಮಾಡುವ ಎಸ್ಚೆರಿಚಿಯಾ ಕೋಲಿ ಕೂಡ ಇದ್ದು, ಇದು ತುಂಬಾ ಸಾಮಾನ್ಯವಾಗಿದೆ. ಹಾಗೆಯೇ ಎಮ್ಮೆಯ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಸಂಶೋಧನೆ ಹೇಗೆ ನಡೆಸಲಾಯಿತು?

ಹಸುಗಳು, ಎಮ್ಮೆಗಳು ಮತ್ತು ಮಾನವರ 73 ಮೂತ್ರದ ಮಾದರಿಗಳ ಅಂಕಿಅಂಶಗಳ ವಿಶ್ಲೇಷಣೆಯನ್ನು ಮಾಡಲಾಗಿದೆ. ಎಮ್ಮೆ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ. ಎಮ್ಮೆಯ ಮೂತ್ರವು ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪಾಂಟಿಸಿಯಂತಹ ಬ್ಯಾಕ್ಟೀರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಭೋಜ್ ರಾಜ್ ಸಿಂಗ್ ಅವರು ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆನ್ಲೈನ್ ಸಂಶೋಧನಾ ವೆಬ್‌ಸೈಟ್‌ ರಿಸರ್ಚ್‌ಗೇಟ್(Researchgate)ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

ಸಂಸ್ಥೆಯ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಸಿಂಗ್ ಅವರು, ತಮ್ಮ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳೊಂದಿಗೆ ಜೂನ್ 2022 ಮತ್ತು ನವೆಂಬರ್ 2022 ರ ನಡುವೆ ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಮೂರು ರೀತಿಯ ಹಸುಗಳಾದ ಸಾಹಿವಾಲ್, ಥಾರ್ಪಾರ್ಕರ್ ಮತ್ತು ವಿಂದಾವನಿ (ಅಡ್ಡ ತಳಿ) ಮೇಲೆ ಸಂಶೋಧನೆ ನಡೆಸಿದ್ದಾರೆ. ಹಸುಗಳ ಮೂತ್ರವಲ್ಲದೇ, ಎಮ್ಮೆ ಮತ್ತು ಮಾನವರ ಮೂತ್ರಗಳ ಮಾದರಿಗಳನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಮೂತ್ರದ ಮಾದರಿಗಳ ಗಾತ್ರದ ಪ್ರಮಾಣವು ಸಂಭಾವ್ಯ ರೋಗಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಗೋಮೂತ್ರಕ್ಕಿಂತಲೂ ಶೋಧಿಸಿದ (distilled) ಗೋಮೂತ್ರದಲ್ಲಿ ಸಾಂಕ್ರಾಮಿಕ ಬ್ಯಾಕ್ಟಿರಿಯಾಗಳು ಕಂಡು ಬರುವುದಿಲ್ಲ ಎಂಬ ವಾದವನ್ನು ಅವರು ಪುರಸ್ಕರಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹಾಗಿದ್ದೂ, ಗೋ ಮೂತ್ರವು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಸಾಮನ್ಯೀಕರಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: NITI Aayog Task Force: ಗೋಮೂತ್ರ, ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ; ನೀತಿ ಆಯೋಗ ವರದಿ

ಸಂಶೋಧನಾ ವರದಿಯನ್ನು ಪ್ರಶ್ನಿಸಿದ ಸಂಸ್ಥೆಯ ಮಾಜಿ ನಿರ್ದೇಶಕ

ಗೋಮೂತ್ರವು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಿದೆ ಎಂಬ ಸಂಶೋಧನಾ ವರದಿ ಪ್ರಕಟವಾಗುತ್ತಿದ್ದಂತೆ, ಐವಿಆರ್‌ಐನ ಮಾಜಿ ನಿರ್ದೇಶಕ ಆರ್ ಎಸ್ ಚೌಹಾಣ್ ಅವರು ಸಂಶೋಧನೆ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ”ನಾನು ಕಳೆದು 25 ವರ್ಷಗಳಿಂದ ಗೋಮೂತ್ರದ ಕುರಿತು ಸಂಶೋಧನೆ ಮಾಡುತ್ತಿದ್ದೇನೆ. ಶೋಧಿಸಿದ ಗೋಮೂತ್ರವು ಮಾನವ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅದು ಕ್ಯಾನ್ಸರ್ ಮತ್ತು ಕೋವಿಡ್‌ ವಿರುದ್ಧ ನೆರವು ಒದಗಿಸುತ್ತದೆ. ಈ ನಿರ್ದಿಷ್ಟ ಸಂಶೋಧನೆಯನ್ನು ಶೋಧಿಸಿದ ಮೂತ್ರದ ಮಾದರಿಗಳ ಮೇಲೆ ಮಾಡಲಾಗಿಲ್ಲ. ಶೋಧಿಸಿದ ಗೋಮೂತ್ರವನ್ನು ಜನರಿಗೆ ಶಿಫಾರಸು ಮಾಡಲಾಗತ್ತದೆ ಎಂದು ಅವರು ಹೇಳಿದ್ದಾರೆ.

Exit mobile version