Site icon Vistara News

National Animal: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸಾಧ್ಯವಿಲ್ಲ! ಸಂಸತ್ತಿಗೆ ಮೋದಿ ಸರ್ಕಾರ ಮಾಹಿತಿ

Cow

ನವದೆಹಲಿ: ಹುಲಿಯು (Tiger National Animal)ಭಾರತದ ರಾಷ್ಟ್ರೀಯ ಪ್ರಾಣಿಯಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ (Cow National Animal) ಗುರುತಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕೃಷ್ಣಾ ರೆಡ್ಡಿ (Union culture minister G Kishan Reddy) ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ‘ಗೋಮತಾ’ (ಹಸು) ವನ್ನು ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಲು ಸರ್ಕಾರ ಉದ್ದೇಶಿಸಿದೆಯೇ ಎಂದು ಸಂಸ್ಕೃತಿ ಸಚಿವಾಲಯಕ್ಕೆ ಭಾರತೀಯ ಜನತಾ ಪಕ್ಷದ (BJP) ಸಂಸತ್ ಸದಸ್ಯ ಭಗೀರಥ ಚೌಧರಿ ಅವರು ಪ್ರಶ್ನೆ ಕೇಳಿದ್ದರು. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಲು ಸಂಸತ್ತಿನಲ್ಲಿ ಶಾಸನವನ್ನು ತರುವ ಮೂಲಕ ಭಾರತೀಯ ಮತ್ತು ‘ಸನಾತನ ಸಂಸ್ಕೃತಿ’ಯ ರಕ್ಷಣೆ ಮತ್ತು ಪುನರುಜ್ಜೀವನವನಗೊಳಿಸಬೇಕು ಎಂದು ಅವರು ಕೋರಿದ್ದರು(National Animal).

ಭಗೀರಥ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂಸ್ಕೃತಿ ಜಿ ಕೃಷ್ಣಾ ರೆಡ್ಡಿ ಅವರು, ಭಾರತ ಸರ್ಕಾರವು ಹುಲಿ ಮತ್ತು ನವಿಲನ್ನು ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ಪಕ್ಷಿ ಎಂದು ಅಧಿಸೂಚನೆ ಮೂಲಕ ಗುರುತಿಸಿದೆ. ಈ ಎರಡನ್ನೂ ಕ್ರಮವಾಗಿ 1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್ 1ರಲ್ಲಿ ಸೇರಿಸಲಾಗಿದೆ ಎಂದು ಅವರು ಉತ್ತರಿಸಿದರು.

ಅಲಹಾಬಾದ್ ಮತ್ತು ಜೈಪುರದ ಹೈಕೋರ್ಟ್ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆದೇಶಿಸಿದೆ ಎಂಬ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಸಚಿವ ಜಿ ಕೃಷ್ಣಾ ರೆಡ್ಡಿ, ಈ ವಿಷಯಗಳು ರಾಜ್ಯದ ಶಾಸಕಾಂಗ ಅಧಿಕಾರಿಗಳ ಕೈಯಲ್ಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Kiccha Sudeep | ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್‌; ಜಿಲ್ಲೆಗೆ ಒಂದರಂತೆ 31 ಗೋವುಗಳ ದತ್ತು

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಪ್ರಯತ್ನಗಳಿಗೆ ಪೂರಕವಾಗಿ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಸ್ಥಳೀಯ ತಳಿಯ ಜಾನುವಾರುಗಳನ್ನು ಒಳಗೊಂಡಂತೆ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಈ ಮಿಷನ್ ದೇಶದಲ್ಲಿ ಜಾನುವಾರು ಸೇರಿದಂತೆ ಸ್ಥಳೀಯ ತಳಿಗಳ ಲಭ್ಯತೆಯನ್ನು ಹೆಚ್ಚಿಸಲು ಕೆಲಸ ಮಾಡಲಿದೆ. ಇಲಾಖೆಯು ಹಸು ಮತ್ತು ಅದರ ಸಂತತಿ ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ ಎಂದು ಸಚಿವ ಜಿ ಕೃಷ್ಣಾ ರೆಡ್ಡಿ ಅವರು ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version