ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ಗೆ (Mumbai Trans Harbour Link-MTHL) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಐದೇ ತಿಂಗಳಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಕಾಂಗ್ರೆಸ್ ಆರೋಪಿಸಿದೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ (Nana Patole) ಅವರು ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ಜನರಿಗೆ ತೋರಿಸಿ ರಸ್ತೆ ಸುರಕ್ಷತೆಯನ್ನು ಪರಿಶೀಲಿಸಿದ್ದಾರೆ. ಹಾಗೆಯೇ, ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಆರೋಪಿಸಿದ್ದಾರೆ.
ನವಿ ಮುಂಬೈನ ಉಲ್ವೆ ಕಡೆ ಹೋಗುವ ಸೇತುವೆ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿವೆ. “ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ. ಸರ್ಕಾರವು ಜನರ ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೆಸೆಯಬೇಕು. ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು” ಎಂದು ನಾನಾ ಪಟೋಳೆ ಆರೋಪಿಸಿದ್ದಾರೆ. 2024ರ ಜನವರಿಯಲ್ಲಿ ನರೇಂದ್ರ ಮೋದಿ ಅವರು ಅಟಲ್ ಸೇತುಗೆ ಚಾಲನೆ ನೀಡಿದ್ದರು.
#WATCH | Mumbai: Maharashtra Congress President Nana Patole inspected the cracks seen on the Mumbai-trans Harbour Link (MTHL) Atal Setu. pic.twitter.com/cwZU4wiI4I
— ANI (@ANI) June 21, 2024
ತಗುಲಿದ ವೆಚ್ಚ ಎಷ್ಟು?
ಈ ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಬರೋಬ್ಬರಿ 17,840 ಕೋಟಿ ರೂಪಾಯಿ. ಈ ಪೈಕಿ 15,000 ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದೆ. ಇದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಇರುವ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಎಂಟಿಎಚ್ಎಲ್‌ನಲ್ಲಿ ಕಾರು, ಲಘು ವಾಹನಗಳು, ಮಿನಿ ಬಸ್‌ಗಳು ಮತ್ತು ಬಸ್‌ಗಳ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ. ಬೈಕ್‌ಗಳು ಸೇರಿದಂತೆ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ಟ್ರ್ಯಾಕ್ಟರ್‌ಗಳ ಪ್ರವೇಶ ನಿಷೇಧಿಸಲಾಗಿದೆ.
प्रधानमंत्री श्री. नरेंद्र मोदी यांच्या हस्ते तीनच महिन्यांपूर्वी लोकार्पण झालेल्या "अटल सेतू" पुलास भेगा पडल्याची बाब अतिशय चिंताजनक आहे. मोठ्या प्रमाणात भेगा पडल्याने प्रवाश्यांमध्ये भीतीचे वातावरण निर्माण झाले आहे. बिहार मध्ये नवनिर्मित पुल कोसळल्याची घटना ताजी असतानाच… pic.twitter.com/NGUrLFinj6
— Nana Patole (@NANA_PATOLE) June 21, 2024
ಸೇತುವೆಯ ವೈಶಿಷ್ಟ್ಯ ಏನು?
ಈ ಅಟಲ್ ಸೇತು ದೇಶದ ಅತೀ ದೊಡ್ಡ ಮತ್ತು ಜಗತ್ತಿನ 12ನೇ ಅತೀ ದೊಡ್ಡ ಸಮುದ್ರ ಸೇತುವೆ ಎನಿಸಿಕೊಂಡಿದೆ. 21.8 ಕಿ.ಮೀ ಉದ್ದದ ಈ ಸೇತುವೆಯು 16.5 ಕಿ.ಮೀ ಸಮುದ್ರದಲ್ಲಿ ಮತ್ತು 5.5 ಕಿ.ಮೀ ಭೂ ಪ್ರದೇಶದಲ್ಲಿ ಚಾಚಿಕೊಂಡಿದೆ. ಸಮುದ್ರ ಮಾರ್ಗವು ಎರಡೂ ಬದಿಗಳಲ್ಲಿ ಮೂರು ಮತ್ತು 2 ತುರ್ತು ಪಥಗಳನ್ನು ಒಳಗೊಂಡಿದೆ. ಈ ಸೇತುವೆಯು ನವೀ ಮುಂಬೈಯ ಉಲ್ವೆ ಮತ್ತು ದಕ್ಷಿಣ ಮುಂಬೈ ನಡುವಿನ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 15-20 ನಿಮಿಷಗಳಿಗೆ ಇಳಿಸಲಿದೆ. ಮೊದಲ ವರ್ಷ ಏಕಮುಖ ಟೋಲ್ ದರ 250 ರೂ. ಮತ್ತು ರೌಂಡ್-ಟ್ರಿಪ್ ಟೋಲ್ ದರ 375 ರೂ. ನಿಗದಿಪಡಿಸಲಾಗಿದೆ. ಕಾರ್ಯಾಚರಣೆ ಪ್ರಾರಂಭವಾದ ಒಂದು ವರ್ಷದ ನಂತರ ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Bridge Collapse: ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ; 10 ಜನ ಜಲಸಮಾಧಿ