Site icon Vistara News

Viral Video: ದ್ರೌಪದಿ ಅಮ್ಮನ ಉತ್ಸವದಲ್ಲಿ ಭಕ್ತರ ಮೇಲೆ ಕ್ರೇನ್​ ಬಿದ್ದು ನಾಲ್ವರ ಸಾವು; ತಮಿಳುನಾಡು ದೇಗುಲದಲ್ಲಿ ದುರಂತ

Crane Collapses In Tamil Nadu 4 Died

ಚೆನ್ನೈ: ತಮಿಳುನಾಡಿನ ರಾಣಿಪೇಟ್​ ಜಿಲ್ಲೆಯ ಅರಕ್ಕೋಣಂ ತಾಲೂಕಲ್ಲಿ ಭಾನುವಾರ ರಾತ್ರಿ ದೇವಸ್ಥಾನವೊಂದರ ಉತ್ಸವದ ವೇಳೆ ಕ್ರೇನ್​ ಬಿದ್ದು (Crane Collapses in Tamil Nadu) ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಚೆನ್ನೈಗೆ ಸಮೀಪವೇ ಇರುವ ಕಿಲ್ವೀಧಿ ಎಂಬ ಗ್ರಾಮದಲ್ಲಿರುವ ದ್ರೌಪದಿ ಅಮ್ಮನ (ಮಂಡಿಯಮ್ಮನ ದೇಗುಲ) ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಮೈಲಾರ ಉತ್ಸವ (Mylar festival) ನಡೆಯುತ್ತಿತ್ತು. ಅನೇಕ ಭಕ್ತರು ಸೇರಿದ್ದರು. ಸಂಜೆ 8.15ರ ಹೊತ್ತಿಗೆ ಅವಘಡ ನಡೆದಿದೆ. 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಮೃತರದನ್ನು ಕೆ.ಮುತ್ತುಕುಮಾರ್ (39), ಎಸ್​. ಭೂಪಾಲನ್​ (40), ಬಿ.ಜ್ಯೋತಿಬಾಬು(17) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.

ಮುಜರಾಯಿ ಇಲಾಖೆಗೆ ಸೇರದ ಈ ದೇವಸ್ಥಾನವನ್ನು ಖಾಸಗಿ ಆಡಳಿತವೇ ನಿರ್ವಹಣೆ ಮಾಡುತ್ತಿದೆ. ಪ್ರತಿವರ್ಷವೂ ಪೊಂಗಲ್ ಹಬ್ಬದ ಬಳಿಕ ಈ ದೇಗುಲದಲ್ಲಿ ಮೈಲಾರ ಉತ್ಸವ ಆಯೋಜಿಸಲಾಗುತ್ತದೆ. ಅಂತೆಯೇ ಭಾನುವಾರ ರಾತ್ರಿಯೂ ಅದ್ಧೂರಿಯಾಗಿ ಹಬ್ಬ ನಡೆಯುತ್ತಿತ್ತು. ಸಾವಿರಾರು ಭಕ್ತರು ಸೇರಿದ್ದರು. ಕ್ರೇನ್​​ನಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ಇಟ್ಟು ಸಾಗಲಾಗುತ್ತಿತ್ತು. ಆ ದೇವಿ ವಿಗ್ರಹ ಇಟ್ಟಲ್ಲಿ ಮೂವರು ಕುಳಿತಿದ್ದರು. ಹಲವು ಭಕ್ತರು ಅವರಿಗೆ ಹೂಮಾಲೆಗಳನ್ನು ಕೊಟ್ಟು, ದೇವಿಗೆ ಹಾಕುವಂತೆ ಹೇಳುತ್ತಿದ್ದರು. ಆದರೆ ಕ್ರೇನ್​​ ಆ ಮೂವರ ಮತ್ತು ದೇವಿ ವಿಗ್ರಹದ ಭಾರ ತಾಳಲಾರದೆ ಪಲ್ಟಿಯಾಗಿದೆ. ಕ್ರೇನ್​​ನಲ್ಲಿ ಕುಳಿತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೇ, ಆಸ್ಪತ್ರೆಗೆ ಸೇರಿದ್ದ 10 ಮಂದಿಯಲ್ಲಿ ಒಬ್ಬರು ಚಿಕಿತ್ಸೆ ಫಲಿಸದೆ ಅಲ್ಲಿ ಮೃತಪಟ್ಟಿದ್ದಾರೆ.

ಕ್ರೇನ್​ ಆಪರೇಟ್ ಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ರಾಣಿಪೇಟ್​ ಜಿಲ್ಲಾಧಿಕಾರಿ ಭಾಸ್ಕರ್​ ಪಾಂಡಿಯನ್​ ಪ್ರತಿಕ್ರಿಯೆ ನೀಡಿ ‘ಈ ದೇವಸ್ಥಾನದ ಉತ್ಸವದಲ್ಲಿ ಕ್ರೇನ್​ ಬಳಸಲು ಯಾರೂ ಅನುಮತಿ ನೀಡಿರಲಿಲ್ಲ. ಇದೊಂದು ಖಾಸಗಿ ದೇವಸ್ಥಾನ. ಇಷ್ಟು ವರ್ಷ ಇಲ್ಲಿ ಯಾರೂ ಕ್ರೇನ್​ ಬಳಸಿದ್ದಿಲ್ಲ. ಇದೇ ಮೊದಲ ಬಾರಿಗೆ ಹೀಗೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಹೆಚ್ಚಿನ ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Exit mobile version