ಚೆನ್ನೈ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ ದೇಶಗಳ ಗಡಿಗಳನ್ನೇ ಧಿಕ್ಕರಿಸಿ ನಡೆದ (Cross Border Love) ಇನ್ನೊಂದು ಪ್ರಕರಣ ವರದಿಯಾಗಿದೆ. ಈ ಬಾರಿ ಶ್ರೀಲಂಕಾದ ಮಹಿಳೆ ಫೇಸ್‌ಬುಕ್ ಗೆಳೆಯನಿಗಾಗಿ ಭಾರತಕ್ಕೆ ಬಂದಿದ್ದಾಳೆ.
ಶ್ರೀಲಂಕಾದ ಮಹಿಳೆ ಶಿವಕುಮಾರಿ ವಿಘ್ನೇಶ್ವರಿ (25) ಆಂಧ್ರಪ್ರದೇಶದಲ್ಲಿರುವ ತನ್ನ ಆರು ವರ್ಷದ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾಳೆ. ಜುಲೈ 20ರಂದು ವಿ ಕೋಟಾದ ದೇವಸ್ಥಾನದಲ್ಲಿ ಈಕೆ ಸ್ನೇಹಿತ ಲಕ್ಷ್ಮಣ್ (28) ನನ್ನು ಮದುವೆಯಾದಳು. 2017ರಲ್ಲಿ ಇವರು ಫೇಸ್‌ಬುಕ್‌ನಲ್ಲಿ ಮೊದಲು ಸಂಪರ್ಕಕ್ಕೆ ಬಂದಿದ್ದರು. ಆರು ವರ್ಷಗಳ ಆನ್‌ಲೈನ್ ಸ್ನೇಹದ ನಂತರ, ಪ್ರವಾಸಿ ವೀಸಾದಲ್ಲಿ ವಿಘ್ನೇಶ್ವರಿ ಭಾರತಕ್ಕೆ ಆಗಮಿಸಿದರು. ಲಕ್ಷ್ಮಣ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಜುಲೈ 8ರಂದು ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದರು.
ಲಕ್ಷ್ಮಣ್ ಆಕೆಯನ್ನು ಚೆನ್ನೈನಲ್ಲಿ ಬರಮಾಡಿಕೊಂಡ ನಂತರ ಅವಳನ್ನು ತನ್ನ ಮನೆಗೆ ಕರೆತಂದ. ಲಕ್ಷ್ಮಣ್ ಕುಟುಂಬದ ಒಪ್ಪಿಗೆಯೊಂದಿಗೆ ಸರಳ ಸುಂದರ ವಿವಾಹದ ಸಮಾರಂಭ ನಡೆದಿದೆ. ಇವರ ಮದುವೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಪತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಲಸೆ ನಿಯಮಾವಳಿಗಳ ಅನುಸಾರವಾಗಿ ಕಾರ್ಯನಿರ್ವಹಿಸಿರುವ ಚಿತ್ತೂರು ಜಿಲ್ಲಾ ಪೊಲೀಸರು ವಿಘ್ನೇಶ್ವರಿಗೆ ನೋಟಿಸ್ ಜಾರಿ ಮಾಡಿದ್ದು, ವೀಸಾ ಅವಧಿ ಮುಗಿಯುವ ಮುನ್ನವೇ ದೇಶ ತೊರೆಯುವಂತೆ ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ವಿಘ್ನೇಶ್ವರಿ ಅವರ ಪ್ರವಾಸಿ ವೀಸಾ ಆಗಸ್ಟ್ 15ರಂದು ಮುಕ್ತಾಯಗೊಳ್ಳಲಿದೆ.
ಇದು ವಿಘ್ನೇಶ್ವರಿಯನ್ನು ವಿಚಲಿತಗೊಳಿಸಿಲ್ಲ. ಆಕೆ ಶಾಶ್ವತವಾಗಿ ಗಂಡನೊಂದಿಗೆ ಭಾರತದಲ್ಲಿ ಉಳಿಯುವ ಇರಾದೆ ವ್ಯಕ್ತಪಡಿಸಿದ್ದಾಳೆ. ಭಾರತೀಯ ಪೌರತ್ವವನ್ನು ಪಡೆಯಲು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ. ಭಾರತೀಯ ಪೌರತ್ವ ಪಡೆಯುವ ವಿಧಾನಗಳ ಬಗ್ಗೆ ವಿಘ್ನೇಶ್ವರಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಭಾರತೀಯ ಪ್ರಜೆಯೊಂದಿಗಿನ ವಿವಾಹದ ಆಧಾರದ ಮೇಲೆ ಆಕೆ ವೀಸಾ ವಿಸ್ತರಣೆ ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Cross Border Love : ಅಂಜು ಈಗ ಫಾತಿಮಾ; ಪಾಕಿಸ್ತಾನದ ಪ್ರೇಮಿಯನ್ನು ಲಗ್ನವಾದ ಭಾರತದ ಮಹಿಳೆ!