ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್ ಹರಿ (Narayan Sakaar Hari) ಅಥವಾ ಸಕಾರ್ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2.5 ಲಕ್ಷ ಜನ ಭಾಗಿಯಾಗಿದ್ದು, ಸತ್ಸಂಗದ ಬಳಿಕ ಎಲ್ಲರೂ ಭೋಲೆ ಬಾಬಾನ ಪಾದ ಮುಟ್ಟಲು ಓಡಿಹೋಗಿದ್ದೇ ಕಾಲ್ತುಳಿತ ಉಂಟಾಗಲು ಕಾರಣ ಎಂದು ತಿಳಿದುಬಂದಿದೆ.
ಕಾಲ್ತುಳಿತದ ಕುರಿತು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. “ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರಿದ್ದರು. ಸತ್ಸಂಗ ಮುಗಿದ ಬಳಿಕ ಇನ್ನೇನು ಭೋಲೆ ಬಾಬಾ ಹೊರಡುವವರಿದ್ದರು. ಇದೇ ವೇಳೆ ಲಕ್ಷಾಂತರ ಜನ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ, ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ” ಎಂಬುದಾಗಿ ಹೇಳಿದ್ದಾರೆ.
#WATCH | On the Hathras stampede incident, Uttar Pradesh CM Yogi Adityanath says "I visited the site of the incident to see the initial arrangements of the causes of the accident and our 3 ministers were camping there since yesterday. The Chief Secretary and the Director General… pic.twitter.com/vpJI9sL79t
— ANI (@ANI) July 3, 2024
ಹತ್ರಾಸ್ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ನೂರಾರು ಜನರ ಸಾವಿನ ಬಳಿಕ ಭೋಲೆ ಬಾಬಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯಾರಿವರು ಭೋಲೆ ಬಾಬಾ?
ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್ ಜಿಲ್ಲೆಯ ಬಹದ್ದೂರ್ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.
ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: Hathras Stampede: ಹತ್ರಾಸ್ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸ್ಥಳದಲ್ಲೇ ಸಾವು