Site icon Vistara News

Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ

Manipur Violence

CRPF jawan killed, 3 injured in firing in Manipur’s Jiribam

ಇಂಫಾಲ: ಕಳೆದ ಒಂದು ವರ್ಷದಿಂದ ಹಿಂಸಾಚಾರದಿಂದ ನಲುಗಿ ಹೋಗುತ್ತಿರುವ ಮಣಿಪುರದಲ್ಲಿ ಭಾನುವಾರ (ಜುಲೈ 14) ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಭಾನುವಾರ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಚಕಮಕಿ ವೇಳೆ ಸಿಆರ್‌ಪಿಎಫ್‌ನ ಒಬ್ಬ ಯೋಧ (CRPF Jawan Killed) ಹುತಾತ್ಮರಾಗಿದ್ದಾರೆ. ಹಾಗೆಯೇ, ಮತ್ತೊಬ್ಬ ಸಿಆರ್‌ಪಿಎಫ್‌ ಯೋಧ ಹಾಗೂ ಇಬ್ಬರು ಪೊಲೀಸ್‌ ಕಮಾಂಡೋಗಳು (Police Commandos) ಗಾಯಗೊಂಡಿದ್ದಾರೆ.

ಮಣಿಪುರದ ಜಿರಿಬಮ್‌ ಜಿಲ್ಲೆಯ ಮೊಂಗ್‌ಬಂಗ್‌ ಹಾಗೂ ಸೀಜಾಂಗ್‌ ಗ್ರಾಮಗಳ ಬಳಿ ಬೆಳಗ್ಗೆ 9.30ರ ಸುಮಾರಿಗೆ ಉದ್ರಿಕ್ತರ ಗುಂಪೊಂದು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಅಜಯ್‌ ಕುಮಾರ್‌ ಝಾ (43) ಎಂಬ ಸಿಆರ್‌ಪಿಎಫ್‌ನ ಚಾಲಕನ ತಲೆಗೆ ಗುಂಡು ತಗುಲಿದೆ. ಕೂಡಲೇ ಅವರನ್ನು ಜಿರಿಬಮ್‌ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ 2023ರ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 200ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡಿದ್ದರು. ಸಂತ್ರಸ್ತರು, ನಿರಾಶ್ರಿತರ ಜತೆ ಮಾತುಕತೆ ನಡೆಸಿದ್ದ ಅವರು, ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದರು. ಮಣಿಪುರಕ್ಕೆ ಭೇಟಿ ನೀಡಿರುವುದು, ಅಲ್ಲಿನ ಜನರ ಜತೆ ಮಾತನಾಡಿರುವುದು, ನಿರಾಶ್ರಿತರ ಕೇಂದ್ರದಲ್ಲಿರುವವರ ಆತಂಕ, ಅವರು ನೋವು ಹಂಚಿಕೊಂಡಿರುವ 5 ನಿಮಿಷದ ವಿಡಿಯೊವನ್ನು ರಾಹುಲ್‌ ಗಾಂಧಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. “ನರೇಂದ್ರ ಮೋದಿ ಅವರೇ, ಮಣಿಪುರಕ್ಕೆ ಬನ್ನಿ. ಇಲ್ಲಿನ ಜನರ ನೋವುಗಳನ್ನು ಆಲಿಸಿ ಹಾಗೂ ಶಾಂತಿ ಸ್ಥಾಪನೆಗೆ ಕರೆ ನೀಡಿ” ಎಂಬುದಾಗಿ ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ. “ಜನರ ಮನೆಗಳನ್ನು ಸುಡಲಾಗುತ್ತಿದೆ, ಅಮಾಯಕ ಜನರ ಪ್ರಾಣವು ಅಪಾಯದಲ್ಲಿದೆ. ಸಾವಿರಾರು ಜನ ನಿರಾಶ್ರಿತರ ಕೇಂದ್ರದಲ್ಲಿ ಕಾಲ ಕಳೆಯುವಂತಾಗಿದೆ” ಎಂದಿದ್ದರು.

ಇದನ್ನೂ ಓದಿ: Maoists Killed: ಛತ್ತೀಸ್‌ಗಢದಲ್ಲಿ 8 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಓರ್ವ ಯೋಧ ಹುತಾತ್ಮ

Exit mobile version