Site icon Vistara News

ಜಾರ್ಖಂಡ್‌ನಲ್ಲಿ ನಾಳೆ ವಿಶ್ವಾಸಮತ; ರಾಜ್ಯದತ್ತ ಜೆಎಂಎಂ ಶಾಸಕರು, ಯಾರ ಬಲ ಎಷ್ಟು?

Champai Soren

Champai Soren's Post On His Resignation And After

ರಾಂಚಿ: ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಬಂಧನಕ್ಕೀಡಾದ ಕಾರಣದಿಂದ ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್‌ ಸೊರೆನ್‌ (Hemant Soren) ಅವರು ರಾಜೀನಾಮೆ ನೀಡಿದ ಬಳಿಕ ಸಿಎಂ ಆಗಿ ಪದಗ್ರಹಣ ಮಾಡಿರುವ ಚಂಪಯಿ ಸೊರೆನ್‌ (Champai Soren) ಅವರಿಗೆ ಸೋಮವಾರ (ಫೆಬ್ರವರಿ 5) ವಿಶ್ವಾಸಮತ ಸಾಬೀತುಪಡಿಸುವ (Jharkhand Floor Test) ಪರೀಕ್ಷೆ ಎದುರಾಗಿದೆ. ಇದಕ್ಕಾಗಿ ಚಂಪಯಿ ಸೊರೆನ್‌ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಜೆಎಂಎಂ ಶಾಸಕರು ಹೈದರಾಬಾದ್‌ನಿಂದ ರಾಂಚಿಗೆ ಆಗಮಿಸಿದ್ದಾರೆ.

ಸೋಮವಾರ ಬೆಳಗ್ಗೆ ಚಂಪಯಿ ಸೊರೆನ್‌ ಅವರು ಸದನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಇ.ಡಿ ಅಧಿಕಾರಿಗಳ ಕಸ್ಟಡಿಯಲ್ಲಿರು ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ಕೂಡ ವಿಶ್ವಾಸಮತ ಸಾಬೀತಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಾಲಯವೇ ಹೇಮಂತ್‌ ಸೊರೆನ್‌ ಅವರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದೆ. ಇನ್ನು, “ಜೆಎಂಎಂ ಮೈತ್ರಿಕೂಟದ ಪರವಾಗಿ 47 ಶಾಸಕರಿದ್ದಾರೆ. ಸುಲಭವಾಗಿ ನಾವು ವಿಶ್ವಾಸಮತ ಪರೀಕ್ಷೆಯಲ್ಲಿ ಮುನ್ನಡೆ ಸಾಧಿಸುತ್ತೇವೆ” ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ತಿಳಿಸಿದ್ದಾರೆ. ಏತನ್ಮಧ್ಯೆಯೇ, ಶಾಸಕರ ಖರೀದಿ ಭೀತಿಯಿಂದ ಹೈದರಾಬಾದ್‌ಗೆ ತೆರಳಿದ್ದ ಜೆಎಂಎಂ ಮೈತ್ರಿಕೂಟದ 40 ಶಾಸಕರು ರಾಂಚಿಯತ್ತ ಪ್ರಯಾಣ ಬೆಳೆಸಿದ್ದಾರೆ.

ರಾಂಚಿಯತ್ತ ಜೆಎಂಎಂ ಶಾಸಕರ ಪ್ರಯಾಣ

ಯಾರ ಬಲ ಎಷ್ಟಿದೆ?

ಜೆಎಂಎಂ ಮೈತ್ರಿಕೂಟ: ಜಾರ್ಖಂಡ್‌ ವಿಧಾನಸಭೆಯು 81 ಶಾಸಕರ ಬಲವನ್ನು ಹೊಂದಿದ್ದು, ಒಂದು ಕ್ಷೇತ್ರದಲ್ಲಿ ಶಾಸಕನ ಆಯ್ಕೆ ಬಾಕಿ ಇರುವ ಕಾರಣ ಬಹುಮತ ಸಾಬೀತಿಗೆ 41 ಶಾಸಕರ ಬೆಂಬಲ ಬೇಕು. ಜೆಎಂಎಂ ಮೈತ್ರಿಕೂಟವು 46 ಶಾಸಕರ ಬಲವನ್ನು ಹೊಂದಿದೆ. ಜೆಎಂಎಂ 28, ಕಾಂಗ್ರೆಸ್‌ 16, ಆರ್‌ಜೆಡಿ 1 ಹಾಗೂ ಸಿಪಿಐ (ಎಂಎಲ್‌) ಒಬ್ಬ ಶಾಸಕನನ್ನು ಹೊಂದಿದೆ. ಇನ್ನು ಬಿಜೆಪಿ ಮೈತ್ರಿಕೂಟವು ಒಟ್ಟು 29 ಶಾಸಕರನ್ನು ಹೊಂದಿದೆ. ಹಾಗಾಗಿ, ಜೆಎಂಎಂ ಮೈತ್ರಿಕೂಟವು ಸುಲಭವಾಗಿ ವಿಶ್ವಾಸಮತ ಸಾಬೀತುಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Jharkhand Politics: ಜಾರ್ಖಂಡ್‌ನಲ್ಲಿ ರಾಜ್ಯಪಾಲರ ಆಟ ಶುರು; ಜೆಎಂಎಂ ಕೂಟದ ಶಾಸಕರ ಖರೀದಿ ಭೀತಿ

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ, ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ, ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ, ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು. ಜನವರಿ 2ರಂದು ಚಂಪಯಿ ಸೊರೆನ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version