ಪ್ರಯಾಗರಾಜ್, ಉತ್ತರ ಪ್ರದೇಶ: ಹತ್ಯೆಗೀಡಾದ ಗ್ಯಾಂಗ್‌ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ (Atiq ahmad) ಪರ ವಕಾಲತ್ತು ನಡೆಸುತ್ತಿರುವ ಲಾಯರ್ ಅವರ ಮನೆಯ ಹತ್ತಿರ ಕಚ್ಚಾ ಬಾಂಬ್ ಸ್ಫೋಟ (Crude bomb explode) ಸಂಭವಿಸಿದೆ. ಪ್ರಯಾಗರಾಜ್‌ನ ಕಟ್ರಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಈ ಘಟನೆ ನಡೆದಿದೆ.
ಕರ್ನಲ್ ಗಂಜ್ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ರಾಮ್ ಮೋಹನ್ ರೈ ಅವರು, ಅತೀಕ್ ಪರ ಲಾಯರ್ ದಯಾಶಂಕರ್ ಮಿಶ್ರಾ ಅವರು ಟಾರ್ಗೆಟ್ ಆಗಿರಲಿಲ್ಲ. ಇಬ್ಬರು ಯುವಕರ ನಡುವಿನ ವೈಷಮ್ಯದಿಂದಾಗಿ ಈ ಕಚ್ಚಾ ಬಾಂಬ್ ಸ್ಫೋಟ ನಡೆದಿದೆ ಎಂದು ಹೇಳಿದ್ದಾರೆ. ಹೀಗಿದ್ದಾಗ್ಯೂ, ಅತೀಕ್ ಮತ್ತು ಅಶ್ರಫ್ ಕೇಸ್ ತೆಗೆದುಕೊಂಡಿದ್ದರಿಂದಲೇ ತಮ್ಮನ್ನು ಬೆದರಿಸಲು ಈ ಕೃತ್ಯ ಎಸಗಲಾಗಿದೆ ಎಂದು ಲಾಯರ್ ಹೇಳಿಕೊಂಡಿದ್ದಾರೆ.
ಈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾನು ಯಾರ ಹೆಸರನ್ನು ತೆಗೆದುಕೊಳ್ಳಲಾರೆ. ಆದರೆ, ನನ್ನನ್ನು ಹೆದರಿಸುವುದಕ್ಕಾಗಿಯೇ ಈ ಡ್ರಾಮಾ ನಡೆದಿದೆ ಎಂಬ ಅನುಮಾನವಿದೆ ಎಂದು ಲಾಯರ್ ಹೇಳಿದ್ದಾರೆ.
ಕಳೆದ ಶನಿವಾರ ಪೊಲೀಸ್ ಕಣ್ಗಾವಲಿನಲ್ಲಿ ಅತೀಕ್ ಮತ್ತು ಅಶ್ರಫ್‌ನನ್ನು ವೈದ್ಯಕೀಯ ಪರೀಕ್ಷೆಗೆ ತೆಗೆದುಕೊಂಡು ಹೋಗುವಾಗ ಅತೀಕ್‌ನ ತಲೆಗೆ ಗುಂಡಿಟ್ಟು ಕೊಲ್ಲಲಾಗಿತ್ತು. ಆತನ ತಲೆ ಮತ್ತು ಎದೆಯಲ್ಲಿ 9 ಬುಲೆಟ್‌ಗಳಿದ್ದವು. ಆತನ ಸಹೋದರ ಅಶ್ರಫ್‌ಗೆ ಐದು ಗುಂಡು ಹೊಡೆಯಲಾಗಿತ್ತು.
ಏ.15ರಂದು ಅತೀಕ್ ಮತ್ತು ಅಶ್ರಫ್ ಹತ್ಯೆ
ಏ.15, ಶನಿವಾರ ಗ್ಯಾಂಗಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅನಾಮಿಕರ ಗುಂಡೇಟಿಗೆ ಬಲಿಯಾಗಿದ್ದರು. 2005ರಲ್ಲಿ ನಡೆದ ಸಮಾಜವಾದಿ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ ಅವರನ್ನು ವೈದ್ಯಕೀಯ ತಪಾಸಣೆಗೆ ಕೊಂಡೊಯ್ಯತ್ತಿದ್ದಾಗ ಘಟನೆ ನಡೆದಿತ್ತು.
ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ರಾಜಕಾರಣಿಯಾಗಿದ್ದರು. 2005ರಲ್ಲಿ ನಡೆದ ಸಮಾಜವಾದಿ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆ ಮಾಡಿದ್ದ ಅತೀಕ್ 2017ರಿಂದ ಜೈಲಿನಲ್ಲಿದ್ದಾನೆ. ಏತನ್ಮಧ್ಯೆ, ಉತ್ತರ ಪ್ರದೇಶ ಪೊಲೀಸರು ಅತೀಕ್ ಕಟ್ಟಿದ್ದ ಗ್ಯಾಂಗ್‌ಸ್ಟರ್ ಸಾಮ್ರಾಜ್ಯವನ್ನು ಹೆಡೆಮುರಿ ಕಟ್ಟಿದ್ದರು. ಆತನಿಗೆ ಸೇರಿದ್ದ ಮನೆ ಅಸ್ತಿ ಎಲ್ಲವನ್ನೂ ಧ್ವಂಸ ಮಾಡಿ ಸರಕಾರದ ವಶಕ್ಕೆ ನೀಡಿದ್ದರು.
ಅತೀಕ್ ಅಹ್ಮದ್ ಜೈಲಿನಲ್ಲಿ ಇದ್ದುಕೊಂಡೇ ರಾಜು ಪಾಲ್ ಹತ್ಯಯ ಸಾಕ್ಷಿಯಾಗಿದ್ದ ಉಮೇಶ್ಪಾಲ್ನನ್ನು ಪುತ್ರನ ಮೂಲಕ ಕೊಲೆ ಮಾಡಿಸಿದ್ದ. ಅಂತೆಯೇ ಎರಡು ದಿನದ ಹಿಂದೆ ಅತೀಕ್‌ನ ಪುತ್ರ ಅಸಾದ್ನನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿ ಬಳಿ ಎನ್ಕೌಂಟರ್ ಮಾಡಿದ್ದರು. ಅವನಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.