ಬೆಂಗಳೂರು: ಜುಲೈ ೧೨ ಗೋ ಮೆಚ್ಚುಗೆ ದಿನ. ಈ ದಿನಕ್ಕಾಗಿ ಪೆಟಾ ಇಂಡಿಯಾ ರೂಪಸಿರುವ ಜಾಹೀರಾತು ಈಗ ಎಲ್ಲ ಗಮನ ಸೆಳೆಯುತ್ತಿದೆ. ದಿಲ್ಲಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಿಲ್ದಾಣಗಳ ಲಗೇಜ್ ಟ್ರಾಲಿಗಳಲ್ಲಿ ʻʻನಿಮ್ಮ ಟ್ರಾಲಿ ತಯಾರಿಸಲು ಇವುಗಳನ್ನು ಕೊಲ್ಲಲಾಯಿತೇ? ಹಿಂಸೆಯು ಹಾರುವುದಿಲ್ಲ. ವೀಗನ್ ಆಗಿ ಬದಲಾಗಿʼ ಎಂದು ಬರೆಯಲಾದ ಬ್ಯಾಗನ್ನು ಇಡಲಾಗಿದೆ. ಈ ಚೀಲದ ಮೇಲೆ ಹಸುವಿನ ದೇಹದ ಚಿತ್ರವಿದೆ. ಲೆದರ್ ಬ್ಯಾಗ್‌ಗಳನ್ನು ತಯಾರಿಸಲು ಗೋವುಗಳು ಸೇರಿದಂತೆ ಪ್ರಾಣಿಗಳ ಚರ್ಮವನ್ನು ಬಳಸುತ್ತಿರುವುದರ ವಿರುದ್ಧ ಪ್ರತಿಭಟನಾರ್ಥವಾಗಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಜಾಹೀರಾತನ್ನು ಬಳಸಲಾಗಿದೆ.
ಜಗತ್ತಿನಾದ್ಯಂತ ಚರ್ಮಕ್ಕಾಗಿ ಪ್ರತಿ ವರ್ಷ ೧೪೦ ಕೋಟಿ ಹಸು, ಕುರಿ, ಮೇಕೆ ಮತ್ತು ಇತರ ಪ್ರಾಣಿಗಳ ಮೇಲೆ ಶೋಷಣೆ ಮಾಡಲಾಗುತ್ತಿದೆ, ಅವುಗಳನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಚರ್ಮಾಧರಿತ ಬ್ಯಾಗ್‌ಗಳನ್ನು ಬಿಟ್ಟು ಸಸ್ಯ ಜನ್ಯ ವಸ್ತುಗಳಿಂದ ತಯಾರಿಸಲಾದ ಲಗೇಜ್ ಬ್ಯಾಗ್‌ಗಳನ್ನು ಖರೀದಿಸಿ, ಹಿಂಸೆ ಮುಕ್ತ ಬ್ಯಾಗೇಜುಗಳ ಬಳಕೆದಾರರಾಗಲು ಮನವಿ ಮಾಡಲಾಗುತ್ತಿದೆ ಎನ್ನುತ್ತಾರೆ ಪೆಟಾ ಇಂಡಿಯಾದ ಹಿರಿಯ ಮೀಡಿಯಾ ಮತ್ತು ಸೆಲೆಬ್ರಿಟಿ ಪ್ರಾಜೆಕ್ಟ್ ಸಂಯೋಜಕಿಯಾಗಿರುವ ಮೋನಿಕಾ ಚೋಪ್ರಾ.
ಭಾರತದಲ್ಲಿ ಚರ್ಮಕ್ಕಾಗಿ ಬಳಸಲಾಗುವ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ತೆಗೆದುಕೊಂಡು ಹೋಗುವಾಗ ಅವುಗಳಿಗೆ ಆಹಾರ, ನೀರನ್ನೂ ಕೊಡಲಾಗುವುದಿಲ್ಲ. ಟ್ರಕ್‌ಗಳಲ್ಲಿ ಅತ್ಯಂತ ಅಮಾನವೀಯವಾಗಿ ತುಂಬಲಾಗಿರುತ್ತದೆ. ಅವುಗಳಲ್ಲಿ ಕಾಲ್ತುಳಿತಕ್ಕೆ ಒಳಗಾಗಿ, ಉಸಿರುಗಟ್ಟಿ ಸಾಯುವ ಪರಿಸ್ಥಿತಿ ಇರುತ್ತದೆ. ಕಸಾಯಿ ಖಾನೆಗೆ ತಲುಪಿದ ಕೂಡಲೇ ಅವುಗಳನ್ನು ಅತ್ಯಂತ ಅಮಾನುಷವಾಗಿ ಎಳೆದು ಹೊರ ಹಾಕಲಾಗುತ್ತದೆ. ಉಳಿದ ಹಸುಗಳ ಮುಂದೆಯೇ ಅವುಗಳ ಕುತ್ತಿಗೆಯನ್ನು ಸೀಳಲಾಗುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ ಕಸಾಯಿ ಖಾನೆಗಳು ನಿಷೇಧಿಸಲ್ಪಟ್ಟಿದ್ದರೂ ಸಹ ಚರ್ಮ ಮತ್ತು ಮಾಂಸಕ್ಕಾಗಿ ಹಸು, ಗೂಳಿಗಳು ಮತ್ತು ಎಮ್ಮೆಗಳನ್ನು ಕೊಲ್ಲಲಾಗುತ್ತಿದೆ ಎಂದು ಮೋನಿಕಾ ಚೋಪ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರ್ಮದ ವಸ್ತುಗಳ ಉತ್ಪಾದನೆಯಲ್ಲಿ ಪ್ರಾಣಿ ಹಿಂಸೆಯಷ್ಟೇ ನಡೆಯುವುದಲ್ಲ. ಚರ್ಮೋದ್ಯಮದಿಂದ ಹವಾಮಾನ ವೈಪರೀತ್ಯ ಆಗುವುದರ ಜತೆಗೆ ಕಾರ್ಮಿಕರನ್ನು ಅನಾರೋಗ್ಯಕ್ಕೆ ತಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬಾಂಗ್ಲಾ ದೇಶದ ಚರ್ಮದ ಟ್ಯಾನಿಂಗ್ ಪ್ರದೇಶಗಳಲ್ಲಿ ಶೇಕಡಾ ೯೦ ಕಾರ್ಮಿಕರು ಮತ್ತು ಅವರ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಪಾಯಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ಅವರು ೫೦ ವರ್ಷಕ್ಕೆ ಮೊದಲೇ ಸಾಯುತ್ತಾರೆ ಎಂಬ ಗಂಭೀರ ಅಂಶದತ್ತ ಮೋನಿಕಾ ಬೊಟ್ಟು ಮಾಡಿದ್ದಾರೆ.
ವೀಗನ್ ಲೆದರ್ ಬಂದಿದೆ ಬಳಸಿಕೊಳ್ಳಿ
ಪ್ರಾಣಿಗಳ ಚರ್ಮದ ಬದಲು ಬ್ಯಾಗ್‌ಗಳನ್ನು ತಯಾರಿಸಲು ಬೇರೆ ಹಲವು ದಾರಿಗಳಿವೆ. ಐಷಾರಾಮಿ ಸಿಂಥೆಟಿಕ್ ವಸ್ತುಗಳಿಂದ ಹಿಡಿದು ಅನಾನಸು ಎಳೆಗಳು, ಹಣ್ಣುಗಳ ತ್ಯಾಜ್ಯ, ಮರುಬಳಕೆ ಪ್ಲಾಸ್ಟಿಕ್, ಅಣಬೆ, ಮಲ್ಬೇರಿ, ಸಾಗುವಾನಿ ಎಲೆಗಳು, ದೇಗುಲದ ತ್ಯಾಜ್ಯ ಹೂವುಗಳು, ತೆಂಗಿನ ಕಾಯಿ ತ್ಯಾಜ್ಯ ಮತ್ತು ಟೊಮೇಟೊ ತ್ಯಾಜ್ಯಗಳಿಂದಲೂ ಬ್ಯಾಗ್‌ಗಳನ್ನು ತಯಾರಿಸಬಹುದಾಗಿದೆ. ಈ ಉದ್ಯಮ ತುಂಬ ದೊಡ್ಡದಾಗಿ ಬೆಳೆಯುತ್ತಿದ್ದು, ೨೦೨೮ರ ವೇಳೆಗೆ ಜಾಗತಿಕ ವೀಗನ್ ಲೆದರ್ ಮಾರುಕಟ್ಟೆಯು ೮೦.೫೫ ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆ ಇದೆ.
ಜಗತ್ತಿನ ಮುಂಚೂಣಿ ಫ್ಯಾಷನ್ ವಿನ್ಯಾಸಕರ ಪ್ರಕಾರ, ಮುಂದಿನ ದಿನಗಳಲ್ಲಿ ವೀಗನ್ ಬ್ಯಾಗ್‌ಗಳಿಗೆ ದೊಡ್ಡ ಭವಿಷ್ಯವಿದೆ. ಇವರು ಕೂಡಾ ಪ್ರಾಣಿಗಳ ಚರ್ಮದ ಬದಲು ವೀಗನ್ ಬ್ಯಾಗ್ ಬಳಸುವಂತೆ ಮನವಿ ಮಾಡಿದ್ದಾರೆ. ಪೆಟಾ ಇಂಡಿಯಾ ಕೂಡಾ ವಿನ್ಯಾಸಕರು ರೂಪಿಸಿರುವ ʻಧರಿಸಲು ಪ್ರಾಣಿಗಳು ನಮ್ಮ ಸ್ವಂತ ಆಸ್ತಿಯಲ್ಲʼ ಎಂಬ ಅಭಿಯಾನದಲ್ಲಿ ಸೇರಿಕೊಂಡಿದೆ. ಮತ್ತು ಗ್ರಾಹಕರು ಸಸ್ಯ ಜನ್ಯ ಬ್ಯಾಗ್‌ಗಳನ್ನು ಖರೀದಿಸುವಂತೆ ಪ್ರೋತ್ಸಾಹಿಸಲು ಜಾಗೃತಿ ಮೂಡಿಸಲು ನಿರ್ಧರಿಸಿದೆ ಎಂದಿದ್ದಾರೆ ಮೋನಿಕಾ ಚೋಪ್ರಾ.
ಏನಿದು ಗೋವು ಮೆಚ್ಚುಗೆ ದಿನ?
ಅಮೆರಿಕದ ಫಾಸ್ಟ್ ಫುಡ್ ಮಾರ್ಕೆಟ್ ತನ್ನ ಚಿಕನ್ ಉತ್ಪನ್ನಗಳನ್ನು ಮಾರಾಟ ಮಾಡಲು ಗೋಮಾಂಸದ ವಿರುದ್ಧ ಆರಂಭಿಸಿದ ಒಂದು ಅಭಿಯಾನ ಇದು. ಅಂದರೆ ಗೋವಿನ ಬಗ್ಗೆ ಕನಿಕರ ಮೂಡುವಂತೆ ಮಾಡುವ ಪ್ರಯತ್ನ ನಡೆಸಿತು. ಆದರೆ, ಪೆಟಾ ಕೋಳಿ, ಹಸು ಎರಡೂ ತಿನ್ನುವ ಆಹಾರವಲ್ಲ, ಫ್ಯಾಷನ್‌ನ ಭಾಗವಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಈ ದಿನವನ್ನು ಬಳಸಿಕೊಳ್ಳುತ್ತಿದೆ.