ಪಿಲಿಭಿತ್: ಈಗಂತೂ ಬಿರುಬೇಸಿಗೆ ಕಾಲ. ಎಳೆನೀರು, ಕಲ್ಲಂಗಡಿ, ಸೌತೆಕಾಯಿಗಳಿಗೆಲ್ಲ ಭರ್ಜರಿ ಬೇಡಿಕೆ. ಉಷ್ಣದಿಂದ ಕಾದು ಕೆಂಡವಾಗುವ ದೇಹವನ್ನು ತಂಪಾಗಿಸಲು ಜನರು ಸಹಜವಾಗಿಯೇ ಇಂಥ ಹಣ್ಣು-ತರಕಾರಿಗಳ ಮೊರೆ ಹೋಗುತ್ತಾರೆ ಆದರೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಗ್ರಾಹಕನೊಬ್ಬನಿಗೆ ‘ಸೌತೆಕಾಯಿ’ಯೂ ಮೈಯಲ್ಲಿನ ಉರಿ ಹೆಚ್ಚಿಸಿದೆ.
ಉಮಾಕಾಂತ್ ಎಂಬ ಹೆಸರಿನ ಆಟೋ ಚಾಲಕ ಮಹೇಶ್ ಎಂಬ ಸೌತೇಕಾಯಿ ವ್ಯಾಪಾರಿಯಿಂದ ಕಿವಿ ಕಚ್ಚಿಸಿಕೊಂಡಿದ್ದಾರೆ. ಉಮಾಕಾಂತ್ ಸೌತೆಕಾಯಿ ಖರೀದಿಸಲೆಂದು ಮಹೇಶ್ ಬಳಿ ಹೋಗಿದ್ದರು. ನನಗೆ ಸ್ವಲ್ಪ ಸೌತೆ ಕಾಯಿ ಕೊಡಿ, ನಾನು ನಂತರ ಹಣ ಕೊಡುತ್ತೇನೆ ಎಂದು ಉಮಾಕಾಂತ್ ಹೇಳುತ್ತಿದ್ದಂತೆ, ಮಹೇಶ್ ಕ್ರೋಧದಿಂದ ಜಗಳಕ್ಕೆ ನಿಂತಿದ್ದಾರೆ. ಇವರಿಬ್ಬರೂ ಕೆಲಕಾಲ ಮಾತಿನ ಚಕಮಕಿ ನಡೆಸಿಕೊಂಡಿದ್ದಾರೆ. ಬಳಿಕ ಮಹೇಶ್ ಉಮಾಕಾಂತ್ನ ಬಲಭಾಗದ ಕಿವಿ ಕಚ್ಚಿದ್ದಾನೆ. ಸದ್ಯ ಉಮಾಕಾಂತ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಉಮಾಕಾಂತ್ನ ಪತ್ನಿ ಸೋನಿ ದೇವಿ ವಿವರಣೆ ನೀಡಿದ್ದಾರೆ. ‘ನನ್ನ ಪತಿ ಉಮಕಾಂತ್ ಆಟೋ ಓಡಿಸಿ, ಡ್ಯೂಟಿ ಮುಗಿಸಿದ ಬಳಿಕ ಮನೆಗೆ ವಾಪಸ್ ಆಗುತ್ತಿದ್ದರು. ಆಗ ಮಹೇಶ್ ಬಳಿ ಹೋಗಿ, ಈಗ ಸೌತೆಕಾಯಿ ಕೊಟ್ಟಿರು, ನಾನು ನಾಳೆ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೇ ಮಹೇಶ್ ದೊಡ್ಡ ಧ್ವನಿಯಲ್ಲಿ ಗಲಾಟೆ ಎತ್ತಿದ್ದಾನೆ. ಕೆಳಮಟ್ಟದ ಶಬ್ದಪ್ರಯೋಗ ಮಾಡಿ ಬೈದಿದ್ದಾನೆ. ಆಗ ನನ್ನ ಪತಿ ಅಲ್ಲಿಂದ ಸುಮ್ಮನೆ ಹೊರಟಿದ್ದರು. ಆದರೆ ಬಿಡದ ಮಹೇಶ್ ಹಿಂಬಾಲಿಸಿಕೊಂಡು ಬಂದು, ಉಮಾಕಾಂತ್ನ ಕಿವಿ ಕಚ್ಚಿದ್ದಾನೆ. ಕಿವಿಯೆಲ್ಲ ರಕ್ತಸಿಕ್ತವಾಗಿತ್ತು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ತನ್ನ ಮರಿಯನ್ನು ಹಿಡಿದ ಹಾವಿನೊಂದಿಗೆ ಸೆಣೆಸಾಟಕ್ಕೆ ನಿಂತ ಹಲ್ಲಿ; ಕಚ್ಚಿದರೂ, ಕುಕ್ಕಿದರೂ ಫಲಿಸಲಿಲ್ಲ ಯತ್ನ
ಸದ್ಯ ಪೊಲೀಸರು ಸೌತೆಕಾಯಿ ವ್ಯಾಪಾರಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರೂ ಹಣ ಉದ್ರಿ ವಿಚಾರಕ್ಕೆ ಜಗಳವಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಮೊದಲೇ ಏನಾದರೂ ಜಗಳ ಇತ್ತಾ ಎಂಬ ಬಗ್ಗೆಯೂ ನಾವು ವಿಚಾರಣೆ ನಡೆಸುತ್ತಿದ್ದೇವೆ. ಇಬ್ಬರೂ ಈ ವೇಳೆ ಮದ್ಯಪಾನ ಮಾಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ಅಚಲ್ ಕುಮಾರ್ ತಿಳಿಸಿದ್ದಾರೆ.