ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಗ್ರಾಹಕರಿಬ್ಬರು ಸೇರಿಕೊಂಡು ಥಳಿಸಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಬ್ಯಾಂಕ್ ಆಫ್ ಇಂಡಿಯಾದ ನಾಡಿಯಾಡ್-ಕಪದ್ವಾಂಜ್ ಶಾಖೆಯಲ್ಲಿ ಗೃಹ ಸಾಲ ವಿಭಾಗದ ಅಧಿಕಾರಿಯಾಗಿರುವ ಮನೀಶ್ ಧಂಗರ್ ಹಲ್ಲೆಗೊಳಗಾದವರು. ಸಮರ್ಥ ಬ್ರಹ್ಮಭಟ್ ಮತ್ತು ಆತನ ಸ್ನೇಹಿತ ಪಾರ್ಥ ಹಲ್ಲೆ ಮಾಡಿದವರಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಲದ ವಿಷಯಕ್ಕೇ ಅವರು ಅಧಿಕಾರಿಗೆ ಥಳಿಸಿದ್ದಾಗಿ ವರದಿಯಾಗಿದೆ. ಈ ವಿಡಿಯೊ ಕೂಡ ವೈರಲ್ ಆಗಿದೆ.
ಅಧಿಕಾರಿ ತನ್ನ ಕುರ್ಚಿಯಲ್ಲಿ ಕುಳಿತಿರುತ್ತಾರೆ. ಆಗೊಬ್ಬ ಅಜಾನುಬಾಹು ವ್ಯಕ್ತಿ (ಸಮರ್ಥ ಭ್ರಹ್ಮ ಭಟ್) ಅಲ್ಲಿಗೆ ಬಂದು ಏಕಾಏಕಿ ಹೊಡೆಯಲು ಪ್ರಾರಂಭಿಸುತ್ತಾನೆ. ಆಗ ಬ್ಯಾಂಕ್ ಸಿಬ್ಬಂದಿ ಅವನನ್ನು ಅತ್ತ ಕಳಿಸಲು ಮುಂದಾಗುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ (ಪಾರ್ಥ)ಕೂಡ ಅಧಿಕಾರಿಗೆ ಹೊಡೆಯಲು ಶುರು ಮಾಡುತ್ತಾನೆ. ಆಮೇಲೆ ಬ್ಯಾಂಕ್ ಸಿಬ್ಬಂದಿಯೆಲ್ಲ ಸೇರಿ ಅವರಿಬ್ಬರನ್ನೂ ಅತ್ತ ಕಳಿಸುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಬಗ್ಗೆ ಮನೀಶ್ ಧಂಗರ್ ಪೊಲೀಸರಿಗೆ ದೂರು ನೀಡಿದ್ದರು. ‘ಸಮರ್ಥ ಬ್ರಹ್ಮಭಟ್ ನನಗೆ ಮೂರರಿಂದ ನಾಲ್ಕು ಬಾರಿ ಹೊಡೆದ. ಅಷ್ಟೇ ಅಲ್ಲ ಒದ್ದಿದ್ದಾನೆ. ನನ್ನ ಸಹೋದ್ಯೋಗಿಗಳು ತಡೆಯಲು ಬಂದಾಗ, ಆತನ ಸ್ನೇಹಿತ ಪಾರ್ಥ ಕೂಡ ಬಂದು ಹೊಡೆದ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಮರ್ಥ್ ಅವರಿಗೆ ನಾವು ಹೆಚ್ಚೇನೂ ಹೇಳಿಲ್ಲ. ಆತನ ಮನೆ ವಿಮಾ ಪಾಲಿಸಿಯ ಪ್ರತಿಯನ್ನು ಕೊಡುವಂತೆ ಪದೇಪದೆ ಫೋನ್ ಮಾಡಿದ್ದೇವೆ ಎಂಬ ಕಾರಣಕ್ಕೆ ಆತ ಕೋಪಗೊಂಡು ಬ್ಯಾಂಕ್ಗೇ ಬಂದು ಹೊಡೆದಿದ್ದಾನೆ ಎಂದು ಅಧಿಕಾರಿ ಧಂಗರ್ ತಿಳಿಸಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral Video: ಇದು ಬಾಲ್ ಬ್ಯಾಲೆನ್ಸಿಂಗ್ ಡಾಗ್, ಹೇಗಿದೆ ನೋಡಿ ವೈರಲ್ ವಿಡಿಯೊ