ಗಾಂಧಿನಗರ: ಪಾಕಿಸ್ತಾನದ ಕರಾಚಿ ಮೂಲಕ ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್‌ಜಾಯ್ ಚಂಡಮಾರುತವು (Cyclone Biparjoy) ಅವಾಂತರ ಸೃಷ್ಟಿಸಿದೆ. ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಭಾವನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ತಂದೆ-ಮಗ ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಮೇಕೆಗಳನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಮಗ ಮೃತಪಟ್ಟಿದ್ದಾರೆ.
ಭಾವನಗರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ದಿಢೀರನೇ ಪ್ರವಾಹ ಸೃಷ್ಟಿಯಾಗಿದೆ. ಇದರಿಂದಾಗಿ ಭಂಡಾರ್ ಗ್ರಾಮವು ಜಲಾವೃತವಾಗಿದೆ. ಇದೇ ವೇಳೆ, ಪ್ರವಾಹದಲ್ಲಿ ಸಿಲುಕಿದ್ದ ಮೇಕೆಗಳನ್ನು ರಕ್ಷಿಸಲು ತಂದೆ ಹಾಗೂ ಮಗ ತೆರಳಿದ್ದಾರೆ. ಆದರೆ, ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿಹೋಗಿದ್ದು, ಶವಗಳು ದೂರದಲ್ಲಿ ಪತ್ತೆಯಾಗಿವೆ. ಮೃತರನ್ನು ರಾಮ್‌ಜಿ ಪರ್ಮಾರ್ (55) ಹಾಗೂ ರಾಕೇಶ್ ಪರ್ಮಾರ್ (22) ಎಂದು ಗುರುತಿಸಲಾಗಿದೆ. ಹಾಗೆಯೇ, ಇವರ 22 ಮೇಕೆಗಳು ಕೂಡ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿವೆ ಎಂದು ತಿಳಿದುಬಂದಿದೆ.
#WATCH | Dwarka, Gujarat: Rough sea at Gomti Ghat as an impact of 'Cyclone Biparjoy' pic.twitter.com/nboDhI4B4Q
— ANI (@ANI) June 16, 2023
22 ಜನಕ್ಕೆ ಗಾಯ, 940 ಗ್ರಾಮಗಳಿಗೆ ಪ್ರವಾಹ ಭೀತಿ
ಬಿಪರ್‌ಜಾಯ್ ಚಂಡಮಾರುತದ ಬಳಿಕ ಭಾರಿ ಮಳೆಯಾದ ಕಾರಣ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿ ಹಲವೆಡೆ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಿಂದಾಗಿ 22 ಜನ ಗಾಯಗೊಂಡಿದ್ದಾರೆ. ಹಾಗೆಯೇ, 940ಕ್ಕೂ ಅಧಿಕ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು, ಇದುವರೆಗೆ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದರೂ, ಕರಾವಳಿ ತೀರದ ಗ್ರಾಮಗಳಿಗೆ ಜಲಪ್ರಳಯದ ಭೀತಿ ಎದುರಾಗಿದೆ.
ಇದನ್ನೂ ಓದಿ: Cyclone Biporjoy: ಬಿಪರ್‌ಜೋಯ್ ಚಂಡಮಾರುತದ ಆತಂಕ, ಬಂದರುಗಳು ಬಂದ್, ರೈಲುಗಳು ಕ್ಯಾನ್ಸಲ್
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದುವರೆಗೆ 99ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಧ್ಯಪ್ರದೇಶದ ಸುಮಾರು 45 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಎಡೆಬಿಡದೆ ಮಳೆ ಸುರಿದ ಕಾರಣ ಮರಗಳು ಧರೆಗುರುಳಿವೆ. ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಕಾರ್ಯಾಚರಣೆಗೆ ಇಳಿಯಲು ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿದ್ಧವಾಗಿವೆ. ಆದಾಗ್ಯೂ, ಭಾರಿ ಅನಾಹುತ ಸೃಷ್ಟಿಸುವ ಭೀತಿ ಹುಟ್ಟಿಸಿದ್ದ ಚಂಡಮಾರುತದ ತೀವ್ರತೆ ತುಸು ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ