ಬಿಪರ್‌ಜಾಯ್ ಚಂಡಮಾರುತ (Cyclone Biparjoy) ಜೂನ್ 15ರಂದು ಕಚ್ ಕರಾವಳಿ ತೀರದಲ್ಲಿರುವ ಜಕೌ ಬಂದರನ್ನು, ಗಂಟೆಗೆ 150 ಕಿಮೀ ವೇಗದಲ್ಲಿ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ, ಸೌರಾಷ್ಟ್ರ ಮತ್ತು ಕಚ್ನಲ್ಲಿ ಇಂದಿನಿಂದಲೇ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕಚ್ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜೂ.16ರವರೆಗೂ ಇಲ್ಲಿ ಸೆಕ್ಷನ್ 144 ಇರಲಿದೆ.
ಮುಂಬಯಿ, ಥಾಣೆಗಳಲ್ಲಿ ಈ ಚಂಡಮಾರುತದ ಪ್ರಭಾವದಿಂದ ಭೂಕುಸಿತ ಆಗುವ ಸಾಧ್ಯತೆ ದಟ್ಟವಾಗಿ ಇರುವುದರಿಂದ ಅಲ್ಲೆಲ್ಲ ಯೆಲ್ಲೋ ಅಲರ್ಟ್ ಹೇರಲಾಗಿದೆ. ಪೂರ್ವ ಮಧ್ಯ ಅರೇಬಿಯನ್ ಸಮುದ್ರದಲ್ಲಿ ರಚನೆಗೊಂಡಿರುವ ಬಿಪರ್‌ಜಾಯ್ ಚಂಡಮಾರುತ ಅತ್ಯಂತ ತೀವ್ರವಾಗಿದೆ. ಇದು ಮೊದಲು 13 ಕಿಲೋಮೀಟರ್ ವೇಗದಲ್ಲಿ ಈಶಾನ್ಯಕ್ಕೆ ಚಲಿಸಿತು. ಇಂದು ಆರು ತಾಸಿನಲ್ಲಿ, ಗಂಟೆಗೆ 7 ಕಿಮೀ ವೇಗದಲ್ಲಿ ಉತ್ತರಕ್ಕೆ ಚಲಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಪಾಯಕಾರಿ ಚಂಡಮಾರುತ ಎನ್ನಿಸಿಕೊಂಡಿರುವ ಬಿಪರ್‌ಜಾಯ್ ಸೌರಾಷ್ಟ್ರ, ಕಚ್, ಮುಂಬಯಿ, ಥಾಣೆಗಳಲ್ಲೆಲ್ಲ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ, ಅಲ್ಲೆಲ್ಲ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸೌರಾಷ್ಟ್ರ ಮತ್ತು ಕಚ್ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಏಳು ತಂಡಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯೂ ಅಲರ್ಟ್ ಆಗಿದ್ದಾರೆ. ಇನ್ನು ಪೋರ್ಬಂದರ್, ದೇವಭೂಮಿ ದ್ವಾರಕಾ, ಜಮ್ನಾಗರ್, ಕಚ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ, ಕೆಳ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದವರನ್ನೆಲ್ಲ ಅಲ್ಲಿಂದ ಸ್ಥಳಾಂತರ ಮಾಡುವ ಕೆಲಸ ಇಂದಿನಿಂದ ಶುರುವಾಗಿದೆ. ಈಗಾಗಲೇ ಸುಮಾರು 7500 ಜನರನ್ನು ಬೇರೆಡೆಗೆ ಕಳಿಸಲಾಗಿದೆ. ಈ ಕರಾವಳಿ ಭಾಗದಿಂದ ಏನಿಲ್ಲವೆಂದರೂ 10 ಸಾವಿರದಷ್ಟು ಜನರು ಸ್ಥಳಾಂತರಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Rain News: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ಮಂಗಳೂರಲ್ಲಿ ಚಿಟಪಟ ಮಳೆ
ಗುಜರಾತ್ನಲ್ಲಿ ಗಾಳಿಯ ವೇಗ ಮಿತಿಮೀರಿ, ಅಪಾರ ಹಾನಿಯಾಗುವ ಸಂಭವ ಹೆಚ್ಚಿರುವುದರಿಂದ ಅಲ್ಲಿನ ಸಚಿವರುಗಳಿಗೂ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಚಂಡಮಾರುತದಿಂದ ಹೆಚ್ಚಿನ ಹಾನಿಗೆ ಒಳಗಾಗುವ ಜಿಲ್ಲೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲು ವಿವಿಧ ಸಚಿವರಿಗೆ ಕೆಲಸ ಹಂಚಲಾಗಿದೆ. ಸಚಿವರಾದ ರಿಶಿಕೇಶ್ ಪಟೇಲ್ ಮತ್ತು ಪ್ರಫುಲ್ಲಾ ಪನ್ಸೂರಿಯಾ ಅವರು ಕಚ್ ಪ್ರದೇಶದ ಹೊಣೆ ಹೊತ್ತಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ವಲಯದ ಮುಖ್ಯಸ್ಥರಾಗಿರುವ ಸುನೀಲ್ ಕಾಂಬ್ಳೆ ಚಂಡಮಾರುತದ ಬಗ್ಗೆ ಪ್ರತಿಕ್ರಿಯೆ ನೀಡಿ ‘ಸದ್ಯ ಬಿಪರ್‌ಜಾಯ್ ಚಂಡಮಾರುತವು ಮುಂಬಯಿಯಿಂದ 500-600 ಕಿಮೀ ದೂರದಲ್ಲಿದೆ. ಈ ಚಂಡಮಾರುತ ಮುಂಬಯಿ ಕರಾವಳಿ ತೀರದ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಆದರೆ ಗಾಳಿಯ ವೇಗ ಅಧಿಕವಾಗಿರುವುದರಿಂದ ಮಾನ್ಸೂನ್ ಪೂರ್ವದ ಮಳೆ ಪ್ರಮಾಣ ಹೆಚ್ಚಾಗಬಹುದು. ಇದು ಹೆಚ್ಚಿನ ಸಮಸ್ಯೆ ತಂದೊಡ್ಡಬಹುದು ಎಂದಿದ್ದಾರೆ.
ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ
ಇನ್ನು ಮೂರು ದಿನಗಳಲ್ಲಿ ಬಿಪರ್‌ಜಾಯ್ ಚಂಡಮಾರುತ ಗುಜರಾತ್ಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪರಿಶೀಲನಾ ಸಭೆ ನಡೆಸಿದ್ದಾರೆ. ಚಂಡಮಾರುತದಿಂದ ಆಗಬಹುದಾದ ಹಾನಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಕರಾವಳಿ ತೀರದಲ್ಲಿ ವಾಸಿಸುತ್ತಿರುವ ಜನರಿಗೆ ಏನೂ ತೊಂದರೆಯಾಗಬಾರದು. ಅಪಾಯದ ಪ್ರದೇಶದಲ್ಲಿ ಇರುವವರನ್ನೆಲ್ಲ ಸುರಕ್ಷಿತವಾಗಿ ಸ್ಥಳಾಂತರ ಮಾಡಿ. ಗುಜರಾತ್ ರಾಜ್ಯ ಸರ್ಕಾರದೊಟ್ಟಿಗೆ ಸಂವಹನ ನಡೆಸಿ. ವಿದ್ಯುತ್, ಸಂಪರ್ಕ, ಆರೋಗ್ಯ ಸೇವೆ, ಕುಡಿಯುವ ನೀರು, ಆಹಾರ ಸೇರಿ ಯಾವುದೇ ಅಗತ್ಯಗಳ ಪೂರೈಕೆಯಲ್ಲಿ ಏರುಪೇರಾಗದಂತೆ ಕ್ರಮ ವಹಿಸಿ’ ಎಂದು ಹೇಳಿದ್ದಾರೆ. ಹಾಗೇ, ಕಂಟ್ರೋಲ್ ರೂಮ್ಗಳನ್ನು ರಚಿಸಬೇಕು ಮತ್ತು ಅವರು 24ಗಂಟೆಯೂ ಕಾರ್ಯಾಚರಣೆ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದೇಶಮಟ್ಟದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ