ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್ ಚಂಡಮಾರುತದ (Cyclone Michaung) ಪರಿಣಾಮ ತಮಿಳುನಾಡಿನಲ್ಲಿ 8 ಮಂದಿ ಇದುವರೆಗೂ ಸತ್ತಿದ್ದಾರೆ. ಹಲವೆಡೆ ಭೂಕುಸಿತವಾಗಿದೆ. ಕಾರು- ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಕುಸಿದಿವೆ. ಶಾಲೆ- ಬ್ಯಾಂಕ್‌ಗಳಿಗೆ ರಜೆ ಸಾರಲಾಗಿದೆ.
ಈ ನಡುವೆ ಚಂಡಮಾರುತದ ಪರಿಣಾಮ ಮುಚ್ಚಲಾಗಿದ್ದ ಚೆನ್ನೈ ವಿಮಾನ ನಿಲ್ದಾಣ (Chennai Airport) ಮತ್ತೆ ಕಾರ್ಯಾಚರಣೆ ಆರಂಭಿಸಿದೆ.
ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಮಳೆ ಉಂಟುಮಾಡಿದೆ. ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳು ಗರಿಷ್ಠ ಹೊಡೆತ ತಿಂದಿವೆ. ಇಲ್ಲಿಯವರೆಗೂ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಕೋಟಿಗಟ್ಟಲೆ ಆಸ್ತಿ ಹಾನಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಇಂದು ಆಂಧ್ರಪ್ರದೇಶದ ಬಾಪಟ್ಲಾದ ಬಳಿಯೂ ಮಿಚಾಂಗ್ ಅಪ್ಪಳಿಸಲಿದೆ. ತಮಿಳುನಾಡು ಉತ್ತರ ಕರಾವಳಿ, ದಕ್ಷಿಣ ಕರಾವಳಿ, ಪುದುಚೇರಿ, ಆಂಧ್ರಪ್ರದೇಶಗಳಲ್ಲಿ ಅಸಾಧಾರಣವಾದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. 90-100 ಕಿಮೀ ವೇಗದಲ್ಲಿ ಗಂಟೆಗೆ 110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.
ಆಂಧ್ರಪ್ರದೇಶದ ದಕ್ಷಿಣ ಕರಾವಳಿಯ ಗ್ರಾಮಗಳಲ್ಲಿ ನೆಲೆಸಿರುವ ಸುಮಾರು 900 ಜನರನ್ನು ಸುರಕ್ಷಿತ ಕಡೆಗೆ ಸ್ಥಳಾಂತರಿಸಲಾಗಿದೆ. ಮಿಚಾಂಗ್ ಚಂಡಮಾರುತದ ತೀವ್ರ ಬಿರುಗಾಳಿ ಕೆಲವೇ ಗಂಟೆಗಳಲ್ಲಿ ಬಪಟ್ಲಾ ಜಿಲ್ಲೆಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದ್ದು, ನಿವಾಸಿಗಳು ಹೊರಾಂಗಣಕ್ಕೆ ಹೋಗದಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ನದಿಗಳು, ಹೊಳೆಗಳು ತುಂಬಿ ಹರಿಯುತ್ತಿದ್ದು, 21 ಸೈಕ್ಲೋನ್ ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ.
ಕರ್ನಾಟಕ ಸಹಾಯಹಸ್ತ
ಮಿಚಾಂಗ್ ಚಂಡಮಾರುತದ ಪ್ರಭಾವದಿಂದ ತೀವ್ರ ಮಳೆಯಾಗುತ್ತಿರುವ ತಮಿಳುನಾಡಿಗೆ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ರಾಜ್ಯ ಸಿದ್ಧವಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಹೇಳಿದ್ದಾರೆ. “ಚಂಡಮಾರುತವನ್ನು ಎದುರಿಸುತ್ತಿರುವ ತಮಿಳುನಾಡು ರಾಜ್ಯದೊಂದಿಗೆ ನಮ್ಮ ಕಾಳಜಿ ಇದೆ. ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ನಾವು ಸಿದ್ಧ. ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ” ಎಂದು ಡಿಕೆ ಶಿವಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮೈಚಾಂಗ್ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?