ಲಖನೌ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಚಂದಿರನ ಅಂಗಳದಲ್ಲಿ ಲ್ಯಾಂಡರ್ ಇಳಿಸುವಷ್ಟು ವೈಜ್ಞಾನಿಕವಾಗಿ ಮುನ್ನಡೆ ಸಾಧಿಸಿದ್ದೇವೆ. ವಿಜ್ಞಾನ, ತಂತ್ರಜ್ಞಾನದಲ್ಲೂ ಭಾರತ ಮುಂದಿದೆ. ಜನ ಶಿಕ್ಷಣ ಪಡೆದರೂ, ಆಧುನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದರೂ ದಲಿತರ ಮೇಲಿನ ದೌರ್ಜನ್ಯ, ಜಾತಿ ವಿಷಬೀಜದ ಹೆಸರಿನಲ್ಲಿ ತೋರುವ ಅಮಾನವೀಯ ಘಟನೆಗಳು ಮಾತ್ರ ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ 65 ವರ್ಷದ ದಲಿತ ವ್ಯಕ್ತಿಯೊಬ್ಬರ (Dalit Man) ಕೊರಳಿಗೆ ಚಪ್ಪಲಿ ಹಾರ (Garland Of Shoes) ಹಾಕಿ, ಊರೆಲ್ಲ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ಹೌದು, ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗ್ರಾಮವೊಂದರಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ದಲಿತ ವ್ಯಕ್ತಿಯು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲೈಂಗಿಕ ಕಿರುಕುಳ ನೀಡಿದ್ದರೆ ಪೊಲೀಸರಿಗೆ ಮಾಹಿತಿ ನೀಡುವ ಬದಲು, ಗ್ರಾಮದ ಯುವಕರು, ಹಿರಿಯರು ಸೇರಿ ಆ ವ್ಯಕ್ತಿಯ ಕೊರಳಿಗೆ ಚಪ್ಪಲಿ ಹಾರ ಹಾಕಿ, ಗ್ರಾಮದ ತುಂಬ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.
A 65-year-old Dalit is being publicly humiliated, he is being paraded around the village with a garland of shoes around his neck, The upper caste village head husband and his associates are responsible for this act, incident happened in UP's Kaushambi. https://t.co/anrkoIf6u5
— The Dalit Voice (@ambedkariteIND) June 21, 2024
ಕೊರಳಲ್ಲಿ ಚಪ್ಪಲಿ ಹಾರ ಹಾಕಿಸಿಕೊಂಡ ದಲಿತ ವ್ಯಕ್ತಿಯು ಮುಖ ಸಪ್ಪೆ ಮಾಡಿಕೊಂಡು ಊರು ತುಂಬ ತಿರುಗಾಡಿದ್ದಾರೆ. ಅವರ ಹಿಂದೆ ಜನ ಕೇಕೆ ಹಾಕುತ್ತ ತೆರಳಿದ್ದಾರೆ. ಇನ್ನೂ ಒಂದಷ್ಟು ಯುವಕರು ವ್ಯಕ್ತಿಯನ್ನು ನೋಡಿ ನಗುತ್ತ, ಚಪ್ಪಲಿ ಹಾರ ಹಾಕಿಕೊಂಡು ತಿರುಗಾಡುವುದನ್ನು ವಿಡಿಯೊ ಮಾಡಿದ್ದಾರೆ. ಕೌಶಂಬಿ ಗ್ರಾಮದ ಬಿರ್ನೆರ್ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರೇಮನಾರಾಯಣ ರವಿದಾಸ್ ಎಂಬ ವ್ಯಕ್ತಿಯನ್ನು ಜನ ಹೀಗೆ ಅಮಾನುಷವಾಗಿ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಗಂಡ ಗುಲಾಬ್‌ಚಂದ್ ಗುಪ್ತಾ ಎಂಬುವರು ದಲಿತ ವ್ಯಕ್ತಿಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆರೋಪದ ಬಳಿಕ ಜನ ವ್ಯಕ್ತಿಯ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ದಲಿತ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಘಟನೆ ಯಾವಾಗ ನಡೆಯಿತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಥಳಿಸಿ ದಲಿತ ಯುವಕನ ಹತ್ಯೆ