Site icon Vistara News

ಇದೆಂಥ ಅನಾಚಾರ; ಆಕಸ್ಮಿಕವಾಗಿ ಮೈ ಮುಟ್ಟಿದ್ದಕ್ಕೆ ದಲಿತನ ಮುಖ ಸೇರಿ ಮೈತುಂಬ ಮಲ ಮೆತ್ತಿದ ನೀಚ

Dalit Lives Matter Poster

Dalit man's body smeared with human excreta in Madhya Pradesh

ಭೋಪಾಲ್:‌ ಮಧ್ಯಪ್ರದೇಶದಲ್ಲಿ ದಲಿತರು, ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗುವ ಹೊಸಲು ಪದ್ಧತಿ ಮುಂದುವರಿದಿದೆ. ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ದಲಿತರಿಗೆ ಮಲ ತಿನ್ನುವಂತೆ ಮುಸ್ಲಿಮರು ಒತ್ತಾಯಿಸಿದ ಪ್ರಕರಣದ ಬೆನ್ನಲ್ಲೇ ಈಗ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಆಕಸ್ಮಿಕವಾಗಿ ದಲಿತ ವ್ಯಕ್ತಿಯೊಬ್ಬ ಮೈ ಮುಟ್ಟಿದ ಎಂದು ಒಬಿಸಿ ಸಮುದಾಯದ ಮತ್ತೊಬ್ಬ ವ್ಯಕ್ತಿಯು ದಲಿತ ವ್ಯಕ್ತಿಯ ಮುಖ ಸೇರಿ ಮೈ ತುಂಬ ಮಲ ಮೆತ್ತುವ ಮೂಲಕ ಕುತ್ಸಿತ ಮನಸ್ಸನ್ನು ಪ್ರದರ್ಶಿಸಿದ್ದಾನೆ.

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಿಕೌರ ಗ್ರಾಮದಲ್ಲಿ ಅನಿಷ್ಟ ಘಟನೆ ನಡೆದಿದೆ. ದಶರಥ ಅಹಿರ್ವಾರ್‌ (Dashrath Ahirwar) ಎಂಬ ದಲಿತ ವ್ಯಕ್ತಿಯು ಗ್ರಾಮದಲ್ಲಿ ಪಂಚಾಯಿತಿ ಕಟ್ಟಡದ ಚರಂಡಿ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ಇದೇ ವೇಳೆ ಗ್ರೀಸ್‌ನಿಂದ ಕೂಡಿದ ಅವರ ಕೈ ಒಬಿಸಿ ಸಮುದಾಯದ ರಾಮಕೃಪಾಲ್‌ ಪಟೇಲ್‌ ಎಂಬಾತನಿಗೆ ಸ್ಪರ್ಶಿಸಿದೆ. ಇದರಿಂದ ಕುಪಿತಗೊಂಡ ರಾಮಕೃಪಾಲ್‌ ಪಟೇಲ್‌, ಮನುಷ್ಯರ ಮಲವನ್ನು ದಲಿತ ವ್ಯಕ್ತಿಯ ಮುಖ ಹಾಗೂ ಮೈಗೆ ಸವರಿ ನೀಚ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ದಶರಥ ಅಹಿರ್ವಾರ್‌ ಅವರು ರಾಮಕೃಪಾಲ್‌ ಪಟೇಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಾದ ಬಳಿಕ ರಾಮಕೃಪಾಲ್‌ ಪಟೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ರಾಮಕೃಪಾಲ್‌ ಪಟೇಲ್‌ ವಿರುದ್ಧ ಗ್ರಾಮದಲ್ಲಿ ಪ್ರತಿಭಟನೆಯನ್ನೂ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಲಕಿಯನ್ನು ಪ್ರೀತಿಸುತ್ತಿದ್ದ ದಲಿತ ವ್ಯಕ್ತಿಗೆ ಥಳಿತ; ಆತನ ಮೇಲೆ ಮೂತ್ರ ವಿಸರ್ಜಿಸಿದ ಒಂಬತ್ತು ದುರುಳರು

ಕೆಲ ದಿನಗಳ ಹಿಂದಷ್ಟೇ, ಶಿವಪುರ ಜಿಲ್ಲೆಯ ವರ್ಖಡಿ ಎಂಬ ಗ್ರಾಮದಲ್ಲಿ ಇಬ್ಬರು ದಲಿತರು ಮುಸ್ಲಿಂ ಸಮುದಾಯದ ಯುವತಿಯರ ಜತೆ ಮಾತನಾಡಿದರು ಎಂಬ ಕಾರಣಕ್ಕಾಗಿ ಮುಸ್ಲಿಂ ಸಮುದಾಯದ ಗುಂಪೊಂದು ಇಬ್ಬರು ದಲಿತರ ಮೇಲೆ ದಾಳಿ ಮಾಡಿತ್ತು. ಅವರ ಮೇಲೆ ಹಲ್ಲೆ ನಡೆಸುವ ಜತೆಗೆ ಮಲ ತಿನ್ನುವಂತೆ ಒತ್ತಾಯ ಮಾಡಿದ್ದರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೂ ಮೊದಲು ಪ್ರವೇಶ್‌ ಶುಕ್ಲಾ ಎಂಬಾತ ಆದಿವಾಸಿ ಕಾರ್ಮಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದಾದ ಬಳಿಕ ಪ್ರವೇಶ್‌ ಶುಕ್ಲಾನನ್ನು ಬಂಧಿಸುವ ಜತೆಗೆ ಆತನ ಮನೆಯನ್ನು ಧ್ವಂಸಗೊಳಿಸಲಾಗಿದೆ.

Exit mobile version