Site icon Vistara News

Dalit vs Thakors: ದಲಿತರ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಖರೀದಿಸದವರ ಕಾರ್ಡ್‌ಗಳನ್ನು ಪಕ್ಕದ ಹಳ್ಳಿಗೆ ವರ್ಗಾಯಿಸಿದ ಡಿಸಿ!

kanti parmar dalit FPS

ಅಹಮದಾಬಾದ್:‌ ಗುಜರಾತಿನ ಒಂದು ಹಳ್ಳಿಯಲ್ಲಿ ದಲಿತರಿಗೆ (Dalit) ಸೇರಿದ ನ್ಯಾಯಬೆಲೆ ಅಂಗಡಿಯಿಂದ (Fair Price Shop) ಪಡಿತರವನ್ನು ಖರೀದಿಸದ ಹಳ್ಳಿಯ ಎಲ್ಲ 436 ಕಾರ್ಡ್‌ದಾರರ ಪಡಿತರ ಚೀಟಿಗಳನ್ನು (ration card) ಜಿಲ್ಲಾಧಿಕಾರಿ ಪಕ್ಕದ ಹಳ್ಳಿಗೆ ವರ್ಗಾಯಿಸಿದ್ದಾರೆ.

ಪಟಾನ್‌ ಜಿಲ್ಲೆಯ ಸರಸ್ವತಿ ತಹಸಿಲ್‌ನ ಕನೋಸನ್ ಗ್ರಾಮಕ್ಕೆ ಸೇರಿದ ಎಲ್ಲಾ 436 ಪಡಿತರ ಚೀಟಿದಾರರು ಪಕ್ಕದ ಗ್ರಾಮದ ಎಡ್ಲಾದಿಂದ ಪಡಿತರವನ್ನು ಖರೀದಿಸಬಹುದು; ದಲಿತರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಿಂದ (ಎಫ್‌ಪಿಎಸ್‌) ಖರೀದಿಸಬೇಕಾಗಿಲ್ಲ ಎಂದು ಪಟಾನ್ ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಆದೇಶಿಸಿದ್ದಾರೆ.

ಕನೋಸನ್‌ ಗ್ರಾಮದಲ್ಲಿರುವ ಹೆಚ್ಚಿನ ಪಡಿತರ ಚೀಟಿದಾರರು ಮೇಲ್ಜಾತಿಯ ಠಾಕೋರ್ ಸಮುದಾಯದವರಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಂತಿ ಪರ್ಮಾರ್ ಎಂಬ ದಲಿತರು ನಡೆಸುತ್ತಿರುವ ಎಫ್‌ಪಿಎಸ್‌ನಿಂದ ತಮ್ಮ ಮಾಸಿಕ ಪಡಿತರವನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂತಿ ಪರ್ಮಾರ್‌ ಯೋಚಿಸುತ್ತಿದ್ದಾರೆ.

ಕನೋಸನ್, ಗುಜರಾತ್‌ನ ʼಸಾಮ್ರಾಸ್ ಗ್ರಾಮʼಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರದ ʼಸಾಮ್ರಾಸ್ ಯೋಜನೆʼಯಡಿ, ಗ್ರಾಮಸ್ಥರು ತಮ್ಮ ವಾರ್ಡ್ ಸದಸ್ಯರು ಮತ್ತು ಸರಪಂಚರನ್ನು ಒಮ್ಮತದಿಂದ ಆಯ್ಕೆ ಮಾಡುತ್ತಾರೆ. ಮತದಾನ ಮಾಡುವುದಿಲ್ಲ. ಅಂತಹ ಗ್ರಾಮಗಳಿಗೆ ರಾಜ್ಯದಿಂದ ವಿಶೇಷ ಪ್ರೋತ್ಸಾಹ ಸಿಗುತ್ತದೆ. ಸಾಮ್ರಾಸ್ ಎಂದರೆ “ಸಾಮಾಜಿಕ ಸಾಮರಸ್ಯ” ಎಂದರ್ಥವಿದೆ.

ದಲಿತ ಕಾಂತಿ ಪರ್ಮಾರ್ ಅವರು ಒಂದೂವರೆ ವರ್ಷದ ಹಿಂದೆ ಠಾಕೋರ್‌ ಒಬ್ಬರಿಗೆ ಪಡಿತರ ನೀಡಲು ನಿರಾಕರಿಸುವುದರೊಂದಿಗೆ ಬಿಕ್ಕಟ್ಟು ಆರಂಭವಾಗಿತ್ತು. ಆ ಠಾಕೋರ್‌ ಈ ಪಡಿತರ ಚೀಟಿ ಮಾನ್ಯತೆ ಹೊಂದಿರಲಿಲ್ಲ ಎಂದು ಪರ್ಮಾರ್‌ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಕಾಂತಿ ಪರ್ಮಾರ್‌ ಬೆದರಿಕೆ ಹಾಕಿದ್ದಾರೆ ಎಂದು ಠಾಕೋರರು ಆರೋಪಿಸಿದ್ದಾರೆ.

ಕನೋಸನ್‌ನ 268 ನಿವಾಸಿಗಳ ಹೇಳಿಕೆಗಳನ್ನು ಜಿಲ್ಲಾಡಳಿತ ದಾಖಲಿಸಿಕೊಂಡಿದೆ. ಅವರಲ್ಲಿ 260 ಜನರು ಪಕ್ಕದ ಹಳ್ಳಿಯಿಂದ ಪಡಿತರ ಖರೀದಿ ಇಚ್ಛೆ ವ್ಯಕ್ತಪಡಿಸಿದ್ದಾರೆ. ಎಂಟು ನಿವಾಸಿಗಳು ಮಾತ್ರ ಕಾಂತಿಯ ಎಫ್‌ಪಿಎಸ್‌ನಿಂದ ಪಡಿತರವನ್ನು ಪಡೆಯಲು ಮುಂದಾಗಿದ್ದಾರೆ. ಸುಮಾರು 2,200 ಜನಸಂಖ್ಯೆಯನ್ನು ಹೊಂದಿರುವ ಕನೋಸನ್‌ನಲ್ಲಿ, 90 ಪ್ರತಿಶತಕ್ಕೂ ಹೆಚ್ಚು ನಿವಾಸಿಗಳು ಠಾಕೋರ್‌ಗಳಾಗಿದ್ದಾರೆ.

ಮೇ ತಿಂಗಳಲ್ಲಿ ಪಟಾನ್ ಪಟ್ಟಣದ ಸಾರ್ವಜನಿಕ ಉದ್ಯಾನವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಕಾಂತಿ ಮೇಲೆ ದೂರು ದಾಖಲಾಗಿದೆ. ವಿಷದ ಪರಿಣಾಮದಿಂದಾಗಿ ಅವರ ಎಡಗಾಲನ್ನು ಕತ್ತರಿಸಬೇಕಾಗಿ ಬಂದಿತ್ತು. ಇದರ ನಂತರ, ಕಾಂತಿ ಅವರ ಮಗ ಮುಖೇಶ್ ಅವರು ಠಾಕೂರ್ ಸಮುದಾಯದ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅವರು ತಮ್ಮ ಅಂಗಡಿಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಒತ್ತಾಯಿಸುವ ಮೂಲಕ ತಮ್ಮ ತಂದೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದರು. ಕಾಂತಿ ಅವರ ಅಂಗಡಿಯ ಪರವಾನಗಿ ರದ್ದುಪಡಿಸಲು ನಾಲ್ವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: Karwar News: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣ; ವಿಡಿಯೊ ಮಾಡಿದ ಯುವಕ‌ನ ಮೇಲೆ ಹಲ್ಲೆ

Exit mobile version