ಚೆನ್ನೈ: ಭಾರತೀಯರು ಚಂದ್ರನ ಮೇಲೆ ಕಾಲಿಟ್ಟಿದ್ದಾರೆ ಎಂದು ಹೆಮ್ಮೆಪಡುತ್ತೇವೆ. ವಿಜ್ಞಾನ ಕ್ಷೇತ್ರದ ಸಾಧನೆಯಲ್ಲಿ ಭಾರತ ಬೇರೆ ದೇಶಕ್ಕಿಂತ ಕಡಿಮೆ ಇಲ್ಲ ಎಂದೂ ಖುಷಿಪಡುತ್ತೇವೆ. ಆದರೆ, ದೇಶದಲ್ಲಿ ಇನ್ನೂ ಮೇಲ್ಜಾತಿ, ಕೆಳಜಾತಿ ಎಂಬ ಭೇದ-ಭಾವದ ಹೊಲಸು ಪದ್ಧತಿಯು ಜನರ ಮನಸ್ಸಿನಿಂದ ತೊಲಗಿಲ್ಲ. ಆದರೆ, ಇಂತಹ ಮನಸ್ಥಿತಿಯನ್ನು ತೊಲಗಿಸುವ ಐತಿಹಾಸಿಕ ಕ್ಷಣಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಥಂಡರಂಪಟ್ಟು ಗ್ರಾಮದಲ್ಲಿರುವ ಮುತ್ತು ಮಾರಿಯಮ್ಮನ್ ದೇವಾಲಯವನ್ನು 80 ವರ್ಷದ ಬಳಿಕ ದಲಿತರು (Dalits Enter Temple) ಪ್ರವೇಶಿಸಿದ್ದಾರೆ.
ಹೌದು, ಕಳೆದ ಎಂಟು ದಶಕಗಳಿಂದ ದೇವಾಲಯ ಪ್ರವೇಶಿಸದೆ, ದೇವರಿಗೆ ಪ್ರಾರ್ಥನೆ ಸಲ್ಲಿಸದೆ, ದೇವಾಲಯದಿಂದ ಹೊರಗೇ ಉಳಿದಿದ್ದ ದಲಿತರು ಭಾನುವಾರ (ಜನವರಿ 29) ವಿರೋಧದ ಮಧ್ಯೆಯೇ ಬಿಗಿ ಪೊಲೀಸ್ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸಿದ್ದಾರೆ. ದಲಿತ ಸಮುದಾಯದ ಪುರುಷರು, ಮಹಿಳೆಯರು, ಮಕ್ಕಳು ಸೇರಿ ಸುಮಾರು 300ಕ್ಕೂ ಅಧಿಕ ಜನ ಪೊಲೀಸ್ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸುವ ಮೂಲಕ ಭೇದ-ಭಾವ ಮನಸ್ಥಿತಿಗೆ ಸೆಡ್ಡು ಹೊಡೆದಿದ್ದಾರೆ.
ಇದನ್ನೂ ಓದಿ: Hanagerekatte Temple | ಎರಡು ಧರ್ಮ, ಒಂದೇ ದೇವಾಲಯ ಭಾವೈಕ್ಯತೆಯ ಭಾಂದವ್ಯ
ವಿರೋಧದ ಮಧ್ಯೆಯೇ ಪ್ರವೇಶ
ಮುತ್ತು ಮಾರಿಯಮ್ಮನ್ ದೇವಾಲಯವು ಹಿಂದು ರಿಲಿಜಿಯಸ್ ಆ್ಯಂಡ್ ಎಂಡೋಮೆಂಡ್ ಬೋರ್ಡ್ ವ್ಯಾಪ್ತಿಗೆ ಬರುತ್ತದೆ. ಪೊಂಗಲ್ ಅವಧಿಯಲ್ಲಿ 12 ದಿನ ಜಾತ್ರೆ ನಡೆಯುತ್ತದೆ. ಜಾತ್ರೆ ಸೇರಿ ಯಾವುದೇ ಸಂದರ್ಭದಲ್ಲೂ ದಲಿತರಿಗೆ ದೇವಾಲಯ ಪ್ರವೇಶಿಸುವುದನ್ನು ಮಂಡಳಿ ನಿರಾಕರಿಸಿತ್ತು. ಆದಾಗ್ಯೂ, ಭಾನುವಾರವೂ ದಲಿತರ ಪ್ರವೇಶಕ್ಕೆ ಮೇಲ್ಜಾತಿಯವರು ವಿರೋಧಿಸಿದ್ದರು. ವಿರೋಧವನ್ನು ಲೆಕ್ಕಿಸದೆಯೇ ದಲಿತರು ದೇಗುಲ ಪ್ರವೇಶಿಸಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದ್ದು, ಐತಿಹಾಸಿಕ ಕ್ಷಣ ಎಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.