Site icon Vistara News

Ram Mandir: ಮಂದಿರ ಆಹ್ವಾನ ತಿರಸ್ಕಾರ; ಚುನಾವಣೆಯಲ್ಲಿ ಸೋಲೆಂದ ಎಂದ ಕಾಂಗ್ರೆಸ್‌ ನಾಯಕ!

Lakshman Singh

Damage done, will be visible in elections: Ex-Congress MLA after party declines Ram Mandir invite

ಭೋಪಾಲ್:‌ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಮತ್ತೊಂದೆಡೆ, ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ ಕಾರಣ ಕಾಂಗ್ರೆಸ್‌ನಲ್ಲಿಯೇ ಆಕ್ಷೇಪ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಸಹೋದರ, ಮಾಜಿ ಶಾಸಕ ಲಕ್ಷ್ಮಣ್‌ ಸಿಂಗ್‌ ಅವರು ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಮಮಂದಿರ ಆಹ್ವಾನ ತಿರಸ್ಕರಿಸಿದ್ದರ ಪರಿಣಾಮವನ್ನು ಪಕ್ಷವು ಚುನಾವಣೆಯಲ್ಲಿ ಎದುರಿಸಲಿದೆ” ಎಂದು ಹೇಳಿದ್ದಾರೆ.

“ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡವರು ಮಾತ್ರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್‌ ಈಗಾಗಲೇ ಪಾಲ್ಗೊಳ್ಳದಿರಲು ತೀರ್ಮಾನಿಸಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಅದನ್ನು ತಿರಸ್ಕರಿಸುವುದರಲ್ಲಿ ಅರ್ಥವೇನಿದೆ? ಆ ಮೂಲಕ ನಾವು ಯಾವ ಸಂದೇಶ ರವಾನಿಸುತ್ತಿದ್ದೇವೆ? ಈಗಾಗಲೇ ಪಕ್ಷದ ನಿರ್ಧಾರವು ಪರಿಣಾಮ ಬೀರಿದೆ. ಇದರ ಫಲಿತಾಂಶವನ್ನು ನಾವು ಚುನಾವಣೆ ಬಳಿಕ ನೋಡಲಿದ್ದೇವೆ” ಎಂದಿದ್ದಾರೆ.

“ರಾಜೀವ್‌ ಗಾಂಧಿಯವರೇ ರಾಮಮಂದಿರದ ಬಾಗಿಲು ತೆರೆಸಿದ್ದರು. ಈಗ ನೀವು ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಹೇಳಿದರೆ ಏನರ್ಥ? ನಿಮ್ಮ ನಾಯಕತ್ವದಲ್ಲಿ ಎಂತಹ ಸಲಹೆಗಾರರು ಇದ್ದಾರೆ ಎಂಬುದಕ್ಕೆ, ಪ್ರಾಣ ಪ್ರತಿಷ್ಠಾಪನೆ ಕುರಿತು ನೀವು ತೆಗೆದುಕೊಂಡಿರುವ ನಿರ್ಧಾರವೇ ಸಾಕ್ಷಿಯಾಗಿದೆ” ಎಂದು ಲಕ್ಷ್ಮಣ್‌ ಸಿಂಗ್‌ ಅವರು ಹೇಳಿದ್ದಾರೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಮೊದಲು ಸೋನಿಯಾ ಗಾಂಧಿ ಅವರು ತೆರಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; 11 ದಿನಗಳ ವ್ರತ ಆರಂಭಿಸಿದ ಮೋದಿ, ಆಡಿಯೊ ಸಂದೇಶ ರವಾನೆ

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳದಿರುವ ಕುರಿತು ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದರು. “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಅಧೀರ್‌ ರಂಜನ್‌ ಚೌಧರಿ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲಾಗಿದೆ. ಭಗವಾನ್‌ ಶ್ರೀರಾಮನನ್ನು ಕೋಟ್ಯಂತರ ಜನ ಆರಾಧಿಸುತ್ತಾರೆ. ಅಷ್ಟಕ್ಕೂ ಧರ್ಮವು ವೈಯಕ್ತಿಕ ವಿಚಾರವಾಗಿದೆ. ಅಷ್ಟಕ್ಕೂ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ-ಆರ್‌ಎಸ್‌ಎಸ್‌ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ, ಕಾಂಗ್ರೆಸ್‌ ನಾಯಕರು ರಾಮಮಂದಿರ ಉದ್ಘಾಟನೆಗೆ ತೆರಳದಿರಲು ತೀರ್ಮಾನಿಸಿದ್ದಾರೆ” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version