ನಾಗ್ಪುರ: ಸೈದ್ಧಾಂತಿಕ ಭಿನ್ನಮತ ಹಾಗೂ ವಿರೋಧಗಳು ಪರಸ್ಪರ ಬೇರೆಯಾದ ಸಂಗತಿಗಳಾಗಿದ್ದು, ಒಂದು ಸಮಾಜದಲ್ಲಿ ಒಂದಾಗಿ ಬದುಕಬೇಕಾದವರು ವೈಯಕ್ತಿಕ ದ್ವೇಷಕ್ಕೆ ಇಳಿಯಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ದತ್ತಾಜಿ ದಿದೋಲ್ಕರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಾತು ಹೇಳಿದ್ದಾರೆ. ದತ್ತಾಜಿ ದಿದೋಲ್ಕರ್ ಅವರು ಆರ್‌ಎಸ್‌ಎಸ್ ಮುಖಂಡರಲ್ಲೊಬ್ಬರಾಗಿದ್ದವರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪಕ ಸದಸ್ಯರು.
ದಿದೋಲ್ಕರ್ ಅವರು ತಮ್ಮ ತಾತ್ವಿಕ ನಿಲುವುಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಎಲ್ಲರೊಂದಿಗೆ ಹಾರ್ದಿಕವಾದ ಸಂಬಂಧವನ್ನು ಹೊಂದಿದ್ದರು. ಎಲ್ಲರ ನಿಲುವುಗಳನ್ನು ಗೌರವಿಸುತ್ತಿದ್ದರು. ಸಿದ್ಧಾಂತಕ್ಕೆ ಭಿನ್ನಾಭಿಪ್ರಾಯ ಇರಬಹುದು. ತಾತ್ವಿಕ ಭಿನ್ನಾಭಿಪ್ರಾಯ ಬೇರೆ, ಆದರೆ ಅದನ್ನು ವೈಯಕ್ತಿಕ ನೆಲೆಯಲ್ಲಿ ಸಮಾಜದಲ್ಲಿ ಹಬ್ಬಿಸಬಾರದು. ಸಮಾಜದಲ್ಲಿ ನಾವು ವೈರವನ್ನು ತಾಳುವ ಬದಲು ಮಾನವೀಯತೆ ಮತ್ತು ನ್ಯಾಯದ ನೆಲೆಯ ಮೇಲೆ ಸರಳ ಬದುಕನ್ನು ಸಾಧಿಸಬೇಕಿದೆ ಎಂದು ಹೊಸಬಾಳೆ ನುಡಿದರು.
ಭಾರತೀಯ ಮಜ್ದೂರ್ ಸಂಘದ ಸ್ಥಾಪಕ ದತ್ತೋಪಂಥ ಠೇಂಗಡಿಯವರು ಹಲವಾರು ಕಮ್ಯುನಿಸ್ಟ್ ನಾಯಕರ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಸೈದ್ಧಾಂತಿಕ ಭಿನ್ನತೆಯ ವೈರಕ್ಕೆ ಕಾರಣವಾಗಬಾರದು. ಯಾರೂ ನಮಗೆ ಸಮಾಜದಲ್ಲಿ ದ್ವೇಷದಿಂದ ಬದುಕುವುದನ್ನು ಕಲಿಸಿಲ್ಲ. ದತ್ತಾಜಿಯಂಥವರು ನಮಗೆ ಇಂಥ ವಿಶಾಲ ಹೃದಯದಿಂದ ಬದುಕುವುದನ್ನು ಕಲಿಸಿಕೊಟ್ಟರು ಎಂದು ಹೊಸಬಾಳೆ ಹೇಳಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮಾರಂಭದಲ್ಲಿದ್ದರು. ಅಭಾವಿಪದ ಆರಂಭಿಕ ದಿನಗಳಲ್ಲಿ ದತ್ತಾಜಿಯವರ ಒಡನಾಟವನ್ನು ನೆನಪಿಸಿಕೊಂಡರು.
ಇದನ್ನೂ ಓದಿ: Pathdarshi Book: ಶ್ರೀ ಕೃಷ್ಣನ ಮಾತಿನಂತೆ ಕಲಿಯುಗದ ಕೃಷ್ಣಭಟ್ಟರು ನಡೆದು ತೋರಿಸಿದ್ದಾರೆ: ದತ್ತಾತ್ರೇಯ ಹೊಸಬಾಳೆ