ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಅವರು ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ನರೇಂದ್ರ ಮೋದಿ ಮಕ್ಕಳೊಂದಿಗೆ ಮಾತನಾಡುವ, ಅವರ ಕಿವಿ ಹಿಡಿದು ಕೀಟಲೆ ಮಾಡುವ, ಮಕ್ಕಳ ಮಾತನ್ನು, ಹಾಡುಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುವ ಹಲವು ಫೋಟೋ-ವಿಡಿಯೋಗಳನ್ನು ನಾವು ನೋಡಿದ್ದೇವೆ. ಅಂತೆಯೇ ಈಗ ಬಿಜೆಪಿ ಸಂಸದರೊಬ್ಬರ ಮಗಳು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತಾಡಿದ್ದಾಳೆ. ಇದೇ ವೇಳೆ ತಾವು ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ ಕೇಳಿ ಮೋದಿಯವರು ದೊಡ್ಡದಾಗಿ ನಕ್ಕಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಸಂಸತ್ತಿಗೆ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಪ್ರಧಾನಿ ಮೋದಿಯವರಿಗೆ ತಮ್ಮ ಕುಟುಂಬವನ್ನು ಭೇಟಿ ಮಾಡಿಸುವುದು ಅವರ ಉದ್ದೇಶ. ಅನಿಲ್ ಫಿರೋಜಿಯಾ ಕಿರಿಯ ಪುತ್ರಿ ಅಹಾನಾ ಫಿರೋಜಿಯಾಗೆ ಇನ್ನೂ ಐದು ವರ್ಷ. ಆಕೆ ಫುಲ್ ಖುಷಿಯಿಂದ ಮೋದಿಯವರ ಬಳಿ ಹೋಗಿ ನಿಂತಳು. ಪ್ರಧಾನಿಗೂ ಆಕೆಯನ್ನು ನೋಡಿ ಸಂತೋಷ ಆಗಿ ‘ನಿನಗೆ ನಾನ್ಯಾರೆಂದು ಗೊತ್ತಾ? ನನ್ನ ಪರಿಚಯ ಇದೆಯಾ?’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಥಟ್ಟನೆ ಅವಳು ‘ಹೌದು, ನನಗೆ ಗೊತ್ತು. ನೀವು ಮೋದಿ ಜೀ, ದಿನಾ ಟಿವಿಯಲ್ಲೇ ಇರ್ತೀರಲ್ಲ !!’ ಎಂದು ಮುಗ್ಧ ನಗು ಬೀರುತ್ತ ಉತ್ತರಿಸಿದಳು. ಮತ್ತೆ ಮೋದಿಯವರು, ‘ಸರಿ, ಹಾಗಿದ್ದರೆ ನಾನು ಏನು ಕೆಲಸ ಮಾಡುತ್ತೇನೆ ಹೇಳು ನೋಡೋಣ’ ಎಂದಿದ್ದಾರೆ. ಅಷ್ಟೇ ವೇಗವಾಗಿ ಪ್ರತಿಕ್ರಿಯೆ ನೀಡಿದ ಬಾಲಕಿ ‘ನೀವು ಲೋಕಸಭೆಯಲ್ಲಿ ಕೆಲಸ ಮಾಡುತ್ತೀರಿ’ ಎಂದು ಹೇಳಿದ್ದಾಳೆ. ಆ ಮಾತನ್ನು ಕೇಳಿ ಪ್ರಧಾನಿ ಮೋದಿ ಮತ್ತು ಅಲ್ಲಿದ್ದ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ನಂತರ ಪ್ರಧಾನಿ, ಆಕೆಗೆ ಚಾಕಲೇಟ್ ಕೊಟ್ಟಿದ್ದಾರೆ.
ತಮ್ಮ ಕುಟುಂಬದವರು ಪ್ರಧಾನಿ ಮೋದಿ ಭೇಟಿ ಮಾಡಿದ ಫೋಟೋಗಳನ್ನು ಅನಿಲ್ ಫಿರೋಜಿಯಾ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಇಂದು ನನ್ನ ಹಿರಿಯ ಪುತ್ರಿ ಪ್ರಿಯಾಂಶಿ ಮತ್ತು ಕಿರಿಯ ಮಗಳು ಅಹಾನಾ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ತುಂಬ ಖುಷಿಯಲ್ಲಿದ್ದಾರೆ. ನನ್ನಿಬ್ಬರೂ ಮಕ್ಕಳಿಗೂ ಮೋದಿ ಜೀ ಆಶೀರ್ವಾದ ಮಾಡಿದರು’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಇದನ್ನೂ ಓದಿ: ವಿಸ್ತಾರ Fact Check | ಔತಣಕೂಟದಲ್ಲಿ ರಾಮನಾಥ ಕೋವಿಂದ್‌ಗೆ ಅವಮಾನಿಸಿದರಾ ಪ್ರಧಾನಿ ಮೋದಿ?