Site icon Vistara News

ಮಗ್ಗುಲ ಮುಳ್ಳು ದಾವತ್‌ ಇ ಇಸ್ಲಾಮಿ ಸಂಘಟನೆ; ಹಳ್ಳಿಗಳಿಗೆ ಬಂದು ಮಸೀದಿಯಲ್ಲಿ ಉಳಿಯುವ ಗುಂಪು

Dawat-e-Islami

ನವ ದೆಹಲಿ: ಉದಯಪುರದಲ್ಲಿ ಇತ್ತೀಚೆಗೆ ಟೇಲರ್‌ ಕನ್ಹಯ್ಯ ಲಾಲ್‌ ಹತ್ಯೆಯ ಬಳಿಕ ದಾವತ್‌ ಇ ಇಸ್ಲಾಮಿ ಸಂಘಟನೆಯ ಹೆಸರು ಪ್ರಚಲಿತಕ್ಕೆ ಬಂದಿದೆ. ಇದೊಂದು ಪಾಕಿಸ್ತಾನಿ ಮೂಲದ ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದೆ. ಇದನ್ನು 1981ರಲ್ಲಿ ಪಾಕಿಸ್ತಾನದ ಕರಾಚಿಯ ಖರಾದಾರ್ ಮಸೀದಿಯಲ್ಲಿ ಮೊಟ್ಟಮೊದಲು ಪ್ರಾರಂಭಿಸಲಾಯಿತು. ಈ ಸಂಘಟನೆಯ ಸಂಸ್ಥಾಪಕ ಮುಖ್ಯಸ್ಥ ಇಲ್ಯಾಸ್‌ ಅತ್ತಾರ್‌ ಖಾದ್ರಿ. ಇಷ್ಟು ವರ್ಷಗಳಲ್ಲಿ ಭಾರತದಲ್ಲಿ ಈ ಸಂಘಟನೆಯ ಹೆಸರು ಆಗೊಮ್ಮೆ-ಈಗೊಮ್ಮೆ ಕೇಳಿಬರುತ್ತಿದ್ದುದು ಬಿಟ್ಟರೆ, ಉಳಿದೆಲ್ಲ ಉಗ್ರಸಂಘಟನೆಗಳಷ್ಟು ಹೆಸರು ಮಾತಿರಲಿಲ್ಲ. ಆದರೆ ಕನ್ಹಯ್ಯಲಾಲ್‌ ಹತ್ಯೆಯ ಆರೋಪಿಗಳು, ಅದರಲ್ಲೂ ಪ್ರಮುಖ ಆರೋಪಿ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಈ ಸಂಘಟನೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಹೊರಬಿದ್ದ ಬಳಿಕ ಈ ಸಂಘಟನೆಯ ಬಗ್ಗೆ ಇನ್ನಷ್ಟು-ಮತ್ತಷ್ಟು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ.

ದಾವತ್‌ ಇ ಇಸ್ಲಾಮಿ ಸಂಘಟನೆಯ ಹೆಸರು ಜಾಸ್ತಿ ಪ್ರಚಲಿತ ಆಗುತ್ತಿದ್ದಂತೆ ರಾಷ್ಟ್ರೀಯ ಮಾಧ್ಯಮವೊಂದು ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಕಲೆ ಹಾಕಿದೆ. ʼಪಾಕಿಸ್ತಾನದ ಕರಾಚಿಯಲ್ಲಿ ಪ್ರಾರಂಭವಾದ ಈ ಸಂಘಟನೆ ಭಾರತಕ್ಕೆ ಪ್ರವೇಶ ಮಾಡಿದ್ದು 2004ರಲ್ಲಿ. ಆ ವರ್ಷ ಸಂಘಟನೆಯ ಸಂಸ್ಥಾಪಕ ಇಲ್ಯಾಸ್‌ ಅತ್ತಾರ್‌ ಖಾದ್ರಿ ಮುಂಬೈಗೆ ಬಂದು, ದಾವತ್‌ ಇ ಇಸ್ಲಾಮಿ ಸಂಘಟನೆಯ ಶಾಖೆಯೊಂದನ್ನು ಸ್ಥಾಪಿಸಿದ ಮತ್ತು ಕಾರಿ ಶಾಕಿರ್ ಅಲಿ ನೂರಿ ಎಂಬಾತನನ್ನು ಅದರ ಮುಖ್ಯಸ್ಥನನ್ನಾಗಿ ಮಾಡಿದ. 1926ರಲ್ಲಿ ಭಾರತದ ಹರ್ಯಾಣದ ಮೇವಾತ್‌ನಲ್ಲಿ ಸ್ಥಾಪಿತವಾಗಿದ್ದ ತಬ್ಲಿಘಿ ಜಮಾತ್‌ ಸಂಘಟನೆಯ ನಿಯಮಗಳನ್ನು ಅನುಕರಿಸುವುದು ಮತ್ತು ಆ ಸಂಘಟನೆಯನ್ನೂ ಮೀರಿ ಬೆಳೆಯುವುದು ದಾವತ್‌ ಇ ಇಸ್ಲಾಮಿಯ ಪರಮೋದ್ದೇಶವಾಗಿತ್ತು.

ಆದರೆ ಈ ಕಾರಿ ಶಾಕಿರ್ ಅಲಿ ನೂರಿ ಕೆಲವೇ ವರ್ಷಗಳಲ್ಲಿ ಸಂಘಟನೆಯಿಂದ ಹೊರಬಿದ್ದ. ಈ ಗುಂಪಿನ ಪಾಕಿಸ್ತಾನದ ಮುಖ್ಯಸ್ಥನೊಬ್ಬನೊಂದಿಗೆ ಸಂಘರ್ಷ ಉಂಟಾದ ಬೆನ್ನಲ್ಲೇ ನೂರಿ ಸಂಘಟನೆಯನ್ನೇ ಬಿಟ್ಟು ಹೊರಟು ಹೊಸ ಬಣವನ್ನೇ ರೂಪಿಸಿ, ಅದಕ್ಕೆ ಸುನ್ನಿ ದಾವತ್‌ ಇ ಇಸ್ಲಾಮಿ ಎಂದು ನಾಮಕರಣ ಮಾಡಿದ. ಉಳಿದವರು ದಾವತ್‌ ಇ ಇಸ್ಲಾಮಿಯಲ್ಲೇ ಉಳಿದರು. ನಾಗ್ಪುರ ಮೂಲದ ಮುಫ್ತಿ ಅಬ್ದುಲ್ ಹಲೀಮ್ ಅಶ್ರಫಿ ಇದರ ಅಧ್ಯಕ್ಷನಾದ. ನಂತರ ಇದರ ಮುಖ್ಯ ಕಚೇರಿ ಮುಂಬೈನಿಂದ ನಾಗ್ಪುರಕ್ಕೆ ಸ್ಥಳಾಂತರವಾಯಿತು.

ದಾವತ್‌ ಇ ಇಸ್ಲಾಮಿ ಹೀಗೆ ವಿಭಜನೆಗೊಂಡ ಬೆನ್ನಲ್ಲೇ ಸಂಸ್ಥಾಪಕ ಮೌಲಾನಾ ಇಲ್ಯಾಸ್‌ ಖಾದ್ರಿ ಮತ್ತೆ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ, ಮುಂಬೈ, ನಾಗ್ಪುರ, ದೆಹಲಿ, ಕಾನ್ಪುರ, ಅಹ್ಮದಾಬಾದ್‌ ಮತ್ತು ಬರೇಲಿಗೆ ಭೇಟಿ ಕೊಟ್ಟು ತಮ್ಮ ಮೂಲಸಂಘಟನೆ ವಿಸ್ತರಿಸುವ ಪ್ರಯತ್ನದಲ್ಲಿ ತೊಡಗಿದ. ಬರೇಲ್ವಿ ಮುಸ್ಲಿಮರು, ವಿದ್ವಾಂಸರು ಈ ಸಂಘಟನೆಯನ್ನು ಬಹುವಾಗಿ ವಿರೋಧಿಸಿದರು. ಅದರ ಬೇರೂರುವಿಕೆಯನ್ನು ತಡೆಯಲು ಪ್ರಯತ್ನಿಸಿದರು. ಆದರೆ ವ್ಯರ್ಥವಾಯಿತು. ಅಷ್ಟರಲ್ಲಾಗಲೇ ದಾವತ್‌ ಇ ಇಸ್ಲಾಮಿ ಒಂದು ಪ್ರಬಲ ಸಂಘಟನೆಯಾಗಿ ಗುರುತಿಸಿಕೊಂಡುಬಿಟ್ಟಿತ್ತು. ಈಗಂತೂ ದೇಶದ ಹಲವು ಕಡೆಗಳಲ್ಲಿ ಇದರ ಕಚೇರಿಗಳು ಇವೆ.

ಕೆಲಸಗಳು ಒಂದೆರಡಲ್ಲ
ದಾವತ್‌ ಇ ಇಸ್ಲಾಮಿ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲಿ ಬಹುಮುಖ್ಯವಾಗಿ ಪುಸ್ತಕ ಪ್ರಕಾಶನ. ಅಷ್ಟಲ್ಲದೆ, ಮಕ್ಕಳು ಮತ್ತು ಯುವಕರಿಗೆ ಅರೇಬಿಕ್‌, ಉರ್ದು ಬೋಧಿಸುತ್ತದೆ. ಒಬ್ಬ ವಿದ್ವಾಂಸನಿಗೆ ಪುಸ್ತಕಗಳನ್ನು ಬರೆಯಲೆಂದೇ ತಿಂಗಳಿಗೆ 80 ರಿಂದ 90 ಸಾವಿರ ರೂಪಾಯಿ ಕೊಡುತ್ತದೆ. ಆ ಪುಸ್ತಕಗಳಲ್ಲಿ ಇರುವ ವಿಷಯಗಳನ್ನು ಮಕ್ಕಳಿಗೆ ಬೋಧನೆ ಮಾಡುತ್ತದೆ.

ಇದನ್ನೂ ಓದಿ: ಕನ್ಹಯ್ಯ ಲಾಲ್‌ ಹತ್ಯೆಯನ್ನು ಮುಸ್ಲಿಮರು ಸ್ಪಷ್ಟವಾಗಿ ಖಂಡಿಸಬೇಕು: ಆರ್‌ಎಸ್‌ಎಸ್‌

ಇನ್ನೊಂದು ಬಹುಮುಖ್ಯ ವಿಷಯ ಎಂದರೆ ಈ ಸಂಘಟನೆ ಗುಂಪುಗಳನ್ನು ರಚಿಸುತ್ತದೆ. ಒಂದೊಂದು ಗುಂಪಿನಲ್ಲಿ ಐದು ಜನ ಇರುತ್ತಾರೆ. ಹೀಗೆ ರಚಿತವಾದ ಗುಂಪನ್ನು ಅದು ಹಳ್ಳಿ-ಹಳ್ಳಿಗೆ ಕಳಿಸುತ್ತದೆ. ಅವರು ಸ್ಥಳೀಯ ಮಸೀದಿಗಳಲ್ಲಿ ಬೀಡುಬಿಟ್ಟು, ತಮ್ಮ ಸಿದ್ಧಾಂತಗಳ ಪ್ರಚಾರ ಶುರುವಿಟ್ಟುಕೊಳ್ಳುತ್ತಾರೆ. ವಿಶೇಷವಾಗಿ 20-30 ವಯಸ್ಸಿನ ಯುವಕರಿಗೆ ತಮ್ಮೊಂದಿಗೆ ಸೇರುವಂತೆ ಈ ಸಂಘಟನೆಯ ಮಂದಿ ಕರೆಯುತ್ತಾರೆ. ಹೀಗೆ ಸೇರ್ಪಡೆಯಾದವರು 40 ದಿನಗಳ ಕಠಿಣ ಧಾರ್ಮಿಕ ಆಚರಣೆಯಲ್ಲಿ ತೊಡಗುವಂತೆ ಮಾಡುತ್ತಾರೆ. ಅವರಿಗೆ ತಮ್ಮ ಸಂಘಟನೆಯ ಮೂಲ ಸಿದ್ಧಾಂತಗಳನ್ನು ಅರುಹುತ್ತಾರೆ. ಪ್ರಾಥಮಿಕ ಶಾಲೆಗಳನ್ನೂ ಸ್ಥಾಪಿಸಿ 6 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಧಾರ್ಮಿಕ ಶಿಕ್ಷಣ ನೀಡುತ್ತದೆ.

ನಂತರ ನುರಿತ ಯುವಕರನ್ನು ಕರಾಚಿಗೆ ಕರೆಸಿ, ಅಲ್ಲಿನ ಪ್ರಧಾನ ಕಚೇರಿಯಲ್ಲಿ ಮತ್ತೆ ತರಬೇತಿ ಪ್ರಾರಂಭವಾಗುತ್ತದೆ. ಸಂಘಟನೆಯ ಮೂಲ ಆಶಯವೇನು, ಕೆಲಸ ಮಾಡುವುದು ಹೇಗೆ ಎಂಬಿತ್ಯಾದಿ ವಿಷಯಗಳನ್ನು ಸವಿವರವಾಗಿ ಕಲಿಸಲಾಗುತ್ತದೆ. ಬರೇಲಿಯಲ್ಲಿರುವ ದಾವತ್‌ ಇ ಇಸ್ಲಾಮಿ ಮುಖ್ಯಸ್ಥನ ಹೆಸರು ಆಮೀರ್‌ ಚಾಂದ್‌ ಮಿಯಾನ್‌ ಎಂದಾಗಿದ್ದು, ಈತನೊಂದಿಗೆ 4000 ಮಂದಿ ಇದ್ದಾರೆ. ನಕಾಟಿಯಾ ನರಿಯಾವಾಲ್ ಎಂಬಲ್ಲಿ ಇವರ ಮದರಸಾ ಇದೆ. ಅಲ್ಲಿ ಧಾರ್ಮಿಕ ಬೋಧನೆ ನಿರಂತರ.

ಇದನ್ನೂ ಓದಿ: Rajasthan murder: ರಾಜಸ್ಥಾನದಲ್ಲಿ ದಾವತ್‌ ಸ್ಲೀಪರ್‌ ಸೆಲ್ ಸ್ಥಾಪಿಸಲು ಯತ್ನಿಸಿದ್ದ ಕನ್ಹಯ್ಯಲಾಲ್‌ ಹಂತಕರು

Exit mobile version