Site icon Vistara News

ಸುರಂಗದಲ್ಲಿ ಸಿಲುಕಿದ 40 ಜನಕ್ಕೆ ಅನಾರೋಗ್ಯ; 6 ದಿನವಾದರೂ ರಕ್ಷಣೆ ದುಸ್ಸಾಧ್ಯ

Tunnel Collapse

Day 6 Of Uttarakhand Tunnel Collapse: Trapped Workers Face Risk Of Trauma, Hypothermia

ಡೆಹ್ರಾಡೂನ್:‌ ಉತ್ತರಾಖಂಡದ ಉತ್ತರಕಾಶಿ (Uttarkashi District) ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು (Tunnel Collapse), ಸುರಂಗದ ಒಳಗಡೆಯೇ ಸಿಲುಕಿದ 40 ಕಾರ್ಮಿಕರ ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಕಾರ್ಮಿಕರ ರಕ್ಷಣೆಗೆ ಕೈಗೊಳ್ಳುತ್ತಿರುವ ಕಾರ್ಯಾಚರಣೆಯು ಆರನೇ ದಿನಕ್ಕೆ ಕಾಲಿಟ್ಟರೂ ಇದುವರೆಗೆ ಜನರನ್ನು ರಕ್ಷಿಸಲು ಆಗುತ್ತಿಲ್ಲ. ಇದರಿಂದಾಗಿ ಸುರಂಗದ ಒಳಗೆ ಸಿಲುಕಿದವರಿಗೆ ಆಘಾತ, ಆತಂಕ, ಉಷ್ಣದ ಪರಿಣಾಮದ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿದೆ. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಇಷ್ಟಾದರೂ ಜನರನ್ನು ಹೊರಗೆ ತರಲು ಆಗುತ್ತಿಲ್ಲ. ಹಲವು ಕಾರಣಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬಸ್ಥರು ಅಧಿಕಾರಿಗಳು, ಸಿಬ್ಬಂದಿ, ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಅತ್ಯಾಧುನಿಕ ಡ್ರಿಲ್ಲಿಂಗ್‌ ಮಷೀನ್‌ ಬಳಕೆ

ಶುಕ್ರವಾರ ಬೆಳಗಿನ ಜಾವದಿಂದಲೇ ರಕ್ಷಣಾ ಕಾರ್ಯಾಚರಣೆಗೆ ಅತ್ಯಾಧುನಿಕ ಡ್ರಿಲ್ಲಿಂಗ್‌ ಮಷೀನ್‌ ಬಳಕೆ ಮಾಡಲಾಗಿದ್ದು, ಇದರಿಂದಲೇ ಸುಮಾರು 21 ಮೀಟರ್‌ ಕೊರೆಯಲಾಗಿದೆ. ಮತ್ತೆ ಮೂರು ಪೈಪ್‌ಗಳನ್ನು ಅಳವಡಿಸಲಾಗಿದ್ದು, ಒಳಗೆ ಸಿಲುಕಿರುವ ಕಾರ್ಮಿಕರಿಗೆ ನೀರು, ಊಟ, ಕೃತಕ ಆಮ್ಲಜನಕ ಸೇರಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಅವಶೇಷದ ಪ್ರಮಾಣವು ಜಾಸ್ತಿ ಇರುವ ಕಾರಣ ರಕ್ಷಣೆ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಭಾರಿ ಅವಶೇಷ ಇರುವ ಕಾರಣ ಇನ್ನೂ ಎರಡು-ಮೂರು ದಿನ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tunnel Collapse: ಸುರಂಗ ಕೊರೆಯುವ ಯತ್ನ ವಿಫಲ; 40 ಕಾರ್ಮಿಕರ ಪ್ರಾಣ ಕ್ಷಣಕ್ಷಣಕ್ಕೂ ಅಪಾಯದತ್ತ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version