Site icon Vistara News

ಹಿಂದಿ ಕಲಿತವರು ಚೆನ್ನೈನಲ್ಲಿ ಟಾಯ್ಲೆಟ್ ತೊಳಿತಾರೆ; ಕಿಡಿ ಹಚ್ಚಿದ ಡಿಎಂಕೆ ನಾಯಕನ ಮಾತು

Dayanidhi Maran

ನವದೆಹಲಿ: ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ಕಟ್ಟಡ ಕಾರ್ಮಿಕರಾಗಿ, ಶೌಚಾಲಯಗಳ ಶುಚಿಗೊಳಿಸುವಂಥ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ ಎಂದು ಡಿಎಂಕೆ ಮುಖಂಡ ದಯಾನಿಧಿ ಮಾರನ್ (Dayanidhi Maran) ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಅವರ ಈ ಮಾತುಗಳು ಉತ್ತರ ವರ್ಸಸ್​ ದಕ್ಷಿಣ ಎಂಬ ವಾದ ಚರ್ಚೆಗೆ ಕಿಡಿ ಹಚ್ಚಿದೆ. ದಯಾನಿಧಿ ಮಾರನ್ ಅವರ ಹೇಳಿಕೆಯ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಬಿಜೆಪಿ ನಾಯಕರು ಇಂಡಿಯಾ ಬ್ಲಾಕ್​ ಸದಸ್ಯ ಪಕ್ಷಗಳ ಅಭಿಪ್ರಾಯವನ್ನು ಕೇಳಿದೆ.

ಉತ್ತರ ಭಾರತದ ರಾಜ್ಯಗಳ ಬಗ್ಗೆ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಕೆಲವು ದಿನಗಳ ಹಿಂದೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಯೂ ವಿವಾದವಾಗಿತ್ತು. (ಆ ವೇಳೆ ಅವರು ಸಿಎಂ ಸ್ಥಾನ ಅಲಂಕರಿಸಿರಲಿಲ್ಲ) ಅವರು ತೆಲಂಗಾಣದ ಡಿಎನ್ಎ ಬಿಹಾರದ ಡಿಎನ್ಎಗಿಂತ ಉತ್ತಮವಾಗಿದೆ ಎಂದು ಹೇಳಿದ್ದರು. ಇದೀಗ ಡಿಎಂಕೆ ನಾಯಕ ದಯಾನಿಧಿ ಮಾರನ್ ಮತ್ತೊಮ್ಮೆ ಉತ್ತರ-ದಕ್ಷಿಣ ಚರ್ಚೆಗೆ ಪ್ರಚೋದನೆ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಯು, ಆರ್​ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಪ್ರತಿಪಕ್ಷಗಳ ಮೈತ್ರಿಕೂಟದ ಭಾಗವಾಗಿವೆ. (ಇಂಡಿಯಾ ಬ್ಲಾಕ್​) ಡಿಎಂಕೆ ಕೂಡ ಈ ಬಣದಲ್ಲಿದೆ. “ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಹಿಂದಿ ಮಾತನಾಡುವ ಜನರ ಬಗ್ಗೆ ತಮ್ಮ ಬಣದ ಪಾಲುದಾರರ ಅಭಿಪ್ರಾಯವನ್ನು ಒಪ್ಪುತ್ತಾರೆಯೇ? ಹಿಂದಿ ಮಾತನಾಡುವ ಜನರ ವಿರುದ್ಧ ಡಿಎಂಕೆ ಮತ್ತು ಇಂಡಿಯಾ ಬ್ಲಾಕ್ ಏಕೆ ಇಷ್ಟೊಂದು ದ್ವೇಷ ಹೊಂದಿವೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು” ಎಂದು ಬಿಹಾರ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವರದಿಗಳ ಪ್ರಕಾರ, ದಯಾನಿಧಿ ಮಾರನ್ ಅವರ ಹೇಳಿಕೆ ಭಾಷಾ ಕಲಿಕೆಯ ಕುರಿತ ಸಂದರ್ಭದ್ದಾಗಿದೆ. ಇಂಗ್ಲಿಷ್ ಕಲಿಯುವ ಮತ್ತು ಹಿಂದಿಯನ್ನು ಮಾತ್ರ ಕಲಿಯುವ ಜನರ ನಡುವಿನ ಹೋಲಿಕೆಯಾಗಿದೆ. ಇಂಗ್ಲಿಷ್ ಕಲಿಯುವವರು ಐಟಿಯಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯುತ್ತಾರೆ. ಹಿಂದಿಯನ್ನು ಮಾತ್ರ ಕಲಿಯುವವರು – ಯುಪಿ ಮತ್ತು ಬಿಹಾರದ ಜನರು- ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ನಾಯಕ ಹೇಳಿದ್ದರು ” ಹಿಂದಿಯನ್ನು ಮಾತ್ರ ಕಲಿತಾಗ ಈ ರೀತಿ ಆಗುತ್ತದೆ ಎಂದು ಎಂದು ದಯಾನಿಧಿ ಹೇಳಿದ್ದರು.

ಇದನ್ನೂ ಓದಿ: Congress Party : ಉತ್ತರ ಪ್ರದೇಶ ಉಸ್ತುವಾರಿಯಿಂದ ಪ್ರಿಯಾಂಕಾ ಗಾಂಧಿ ಔಟ್!

ಕಳೆದ ತಿಂಗಳು ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದರೆ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿತ್ತು. ಅಲ್ಲಿಂದ ಉತ್ತರ-ದಕ್ಷಿಣ ಚರ್ಚೆ ಪ್ರಾರಂಭಗೊಂಡಿತ್ತು. ಈ ಸಂದರ್ಭದಲ್ಲಿ ಡಿಎಂಕೆಯ ಸೆಂಥಿಲ್ ಕುಮಾರ್ ಉತ್ತರ ಭಾರತದ ರಾಜ್ಯಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಇಂಡಿಯಾ ಬ್ಲಾಕ್​ನಲ್ಲೂ ಇದೇ ಚರ್ಚೆ

ಕಾಂಗ್ರೆಸ್​ ನೇತೃತ್ವದ ಇಂಡಿಯಾ ಬ್ಲಾಕ್​ನ ಪಕ್ಷಗಳ ಮುಖಂಡರ ನಡುವೆಯೂ ಉತ್ತರ- ದಕ್ಷಿಣ ಗಲಾಟೆಯಿದೆ. ಇತ್ತೀಚಿನ ಸಭೆಯಲ್ಲಿ ನಿತೀಶ್ ಕುಮಾರ್ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಮತ್ತು ಡಿಎಂಕೆ ನಾಯಕ ಟಿ.ಆರ್.ಬಾಲು ಅವರು ಅದರ ಇಂಗ್ಲಿಷ್ ಅನುವಾದದ ಪ್ರತಿ ಕೋರಿದ್ದರು. ಈ ವೇಳೆ ನಿತೀಶ್​ “ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಎಲ್ಲರೂ ಆ ಭಾಷೆಯನ್ನು ತಿಳಿದಿರಬೇಕು” ಹೇಳಿ ಇಂಗ್ಲಿಷ್ ಪ್ರತಿ ಕೊಟ್ಟಿರಲಿಲ್ಲ. ಬಳಿಕ ಆರ್​ಜೆಡಿ ಸಂಸದ ಮನೋಜ್ ಝಾ ಅನುವಾದ ಮಾಡಿದ್ದರು.

Exit mobile version