Site icon Vistara News

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

DD News Logo

DD News Puts Behind Its Iconic Red Logo For A Saffron Makeover

ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಸರ್ಕಾರವು ಶಾಲೆಗಳಿಗೆ ಕೇಸರಿ ಬಣ್ಣ ಬಳಿಸಿದಾಗ, ಹೊಸ ಸಂಸತ್‌ ಭವನದ ಆಸನಗಳು ಕೇಸರಿಮಯವಾಗಿದ್ದಾಗ ಟೀಕೆ, ಪರ-ವಿರೋಧ ಚರ್ಚೆಗಳು ನಡೆದಿದ್ದವು. ಈಗ ರಾಮನವಮಿ (Ram Navami) ದಿನವೇ ಕೇಂದ್ರ ಸರ್ಕಾರಿ ಪ್ರಾಯೋಜಿತ ಡಿಡಿ ನ್ಯೂಸ್‌ ಚಾನೆಲ್‌ನ (DD News Logo) ಲೋಗೊವನ್ನು ಕೇಸರಿಮಯವನ್ನಾಗಿ ಮಾಡಲಾಗಿದೆ. ಹೊಸ ಲೋಗೊ ಬಿಡುಗಡೆಯಾದ ಬೆನ್ನಲ್ಲೇ ಈಗ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

“ನಮ್ಮ ಮೌಲ್ಯಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುತ್ತಲೇ ನಿಮ್ಮೆದುರು ಹೊಸ ಅವತಾರದೊಂದಿಗೆ ಬಂದಿದ್ದೇವೆ. ಎಂದಿನಂತೆ ಸುದ್ದಿಯ ಪಯಣಕ್ಕೆ ನೀವೂ ಸಜ್ಜಾಗಿ. ಹೊಸ ಡಿಡಿ ನ್ಯೂಸ್‌ನ ಅನುಭವವನ್ನೂ ನೀವೂ ಪಡೆಯಿರಿ. ವೇಗಕ್ಕಿಂತ ನಿಖರತೆಗೆ, ಪ್ರಸ್ತಾಪಗಳಿಗಿಂತ ವಾಸ್ತವಾಂಶಗಳಿಗೆ, ಸೂಕ್ಷ್ಮತೆಯ ಬಣ್ಣಕ್ಕಿಂತ ಸತ್ಯದ ಕಡೆಗೆ ನಾವಿದ್ದೇವೆ ಎಂಬುದನ್ನು ಧೈರ್ಯವಾಗಿ ಹೇಳುತ್ತೇವೆ. ಡಿಡಿ ನ್ಯೂಸ್-ಸತ್ಯದ ಭರವಸೆ” ಎಂಬುದಾಗಿ ಡಿಡಿ ನ್ಯೂಸ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹೊಸ ಲೋಗೊ ಕುರಿತು ವಿಡಿಯೊ ಸಮೇತ ಪೋಸ್ಟ್‌ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ಡಿಡಿ ನ್ಯೂಸ್‌ ಲೋಗೊ ಕೆಂಪು ಬಣ್ಣದಿಂದ ಕೂಡಿತ್ತು. ಆದರೀಗ, ಆ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಡಿಡಿ ನ್ಯೂಸ್‌ ಲೋಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೆಂಪು ಬಣ್ಣವನ್ನು ಮಾತ್ರ ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಹೊಸ ಲೋಗೊ ಬದಲಾಯಿಸುತ್ತಲೇ ಫೇಸ್‌ಬುಕ್‌, ಎಕ್ಸ್‌ ಸೇರಿ ಎಲ್ಲ ಜಾಲತಾಣಗಳಲ್ಲೂ ಹೊಸ ಲೋಗೊ ಕಾಣಿಸಿಕೊಂಡಿದೆ. ಜನರು ಕೂಡ ಹೊಸ ಲೋಗೊವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಪರ-ವಿರೋಧ ಚರ್ಚೆ

ಡಿಡಿ ನ್ಯೂಸ್‌ ಚಾನೆಲ್‌ನ ಲೋಗೊ ಬದಲಾಯಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. “ಹೊಸದಾದ, ಅದ್ಭುತ ಲೋಗೊದೊಂದಿಗೆ ಡಿಡಿ ನ್ಯೂಸ್‌ ಬಂದಿದೆ. ನಮ್ಮ ವಿಶ್ವಾಸ ಗಳಿಸಿರುವ ಡಿಡಿ ನ್ಯೂಸ್‌ ಇನ್ನಷ್ಟು ಏಳಿಗೆ ಹೊಂದಲಿ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಗದ್ದಲದ ಸುದ್ದಿ ಜಗತ್ತಿನಲ್ಲಿ ವಾಸ್ತವ ತಿಳಿಸುವ ಡಿಡಿ ನ್ಯೂಸ್‌ ಹೊಸ ಲೋಗೊ, ಹೊಸ ಅವತಾರದ ಕುರಿತು ಉತ್ಸುಕನಾಗಿದ್ದೇನೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು, “ಇದು ಕೂಡ ಗೋದಿ ಮೀಡಿಯಾ”, “ಸರ್ಕಾರದ ಸುದ್ದಿ ಚಾನೆಲ್‌ಗೂ ಏಕೆ ಕೇಸರಿ ಬಣ್ಣ” ಎಂಬುದಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

Exit mobile version