Site icon Vistara News

ʼಅಂಥವರಿಗೆ ವಿಮಾನ ಹತ್ತಲು ಬಿಡಲೇಬೇಡಿʼ: ಡಿಜಿಸಿಎಗೆ ದೆಹಲಿ ಹೈಕೋರ್ಟ್‌ನಿಂದ ಮಹತ್ವದ ಆದೇಶ

Delhi Highcourt

ನವ ದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶುಕ್ರವಾರ (ಜೂ.3) 4041 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ತಿಂಗಳಲ್ಲಿ ಒಂದು ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಹೊಸ ಕೇಸ್‌ಗಳು ದಾಖಲಾಗಿರಲಿಲ್ಲ. ಈ ಮಧ್ಯೆ ದೆಹಲಿ ಹೈಕೋರ್ಟ್‌(Delhi High Court), ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA)ಕ್ಕೆ ಒಂದು ಮಹತ್ವದ ಸೂಚನೆ ನೀಡಿದೆ. ಏರ್‌ಪೋರ್ಟ್‌ಗಳಲ್ಲಿ ಯಾವ ಪ್ರಯಾಣಿಕರು ಕೋವಿಡ್‌ 19 ನಿಯಂತ್ರಣಾ ನಿಯಮಗಳನ್ನು ಅನುಸರಿಸುವುದಿಲ್ಲವೋ, ಸ್ವಚ್ಛತೆ ಪಾಲನೆ ಮಾಡುವುದಿಲ್ಲವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಥವರನ್ನು ವಿಮಾನ ಹತ್ತಲು ಬಿಡಬಾರದು ಎಂಬ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಯಾಕೆಂದರೆ ಕೋವಿಡ್‌ 19 ಸೋಂಕು ಇನ್ನೂ ತಗ್ಗಿಲ್ಲ ಎಂದು ಹೇಳಿದೆ.

2021ರ ಮಾರ್ಚ್ ನಲ್ಲಿ ನ್ಯಾಯಮೂರ್ತಿ ಸಿ. ಹರಿಶಂಕರ್‌ ಅವರು ಕೋಲ್ಕತ್ತಕ್ಕೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಏರ್‌ಪೋರ್ಟ್‌ನಲ್ಲಿ ಹಲವು ಪ್ರಯಾಣಿಕರು ಕೊರೊನಾ ನಿಯಂತ್ರಣ ನಿಯಮಗಳ ಪಾಲನೆ ಮಾಡದೆ ಇರುವುದನ್ನು ಗಮನಿಸಿದ್ದರು. ಅನೇಕರು ತಮ್ಮ ಮಾಸ್ಕನ್ನು ಗಲ್ಲದ ಮೇಲೆ ಹಾಕಿಕೊಂಡು ಓಡಾಡುತ್ತಿರುವುದನ್ನ ನೋಡಿದ್ದ ನ್ಯಾಯಮೂರ್ತಿ, ಈ ವಿಷಯವನ್ನು ಸ್ವಯಂಪ್ರೇರಿತ ವಿಚಾರಣೆಗೆ ಎತ್ತಿಕೊಂಡಿದ್ದರು. 2021ರ ಮಾರ್ಚ್‌ 5ರಿಂದ ಕೇಸ್‌ನ ವಿಚಾರಣೆ ಶುರುವಾಗಿದೆ.

ಇದೀಗ ತೀರ್ಪು ಪ್ರಕಟಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಂಘಿ ಮತ್ತು ನ್ಯಾ.. ಸಚಿನ್‌ ದತ್ತಾ ಅವರನ್ನೊಳಗೊಂಡ ಪೀಠ, ಏರ್‌ಪೋರ್ಟ್‌ನಲ್ಲಿ ಕೊರೊನಾ ನಿಯಂತ್ರಣ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬಹುದು, ಅವರ ವಿರುದ್ಧ ಕೇಸ್‌ ಹಾಕಬಹುದು. ಅಗತ್ಯ ಬಿದ್ದರೆ ವಿಮಾನ ಹತ್ತಲು ಅವಕಾಶ ನೀಡದೆ ಇರಬಹುದು. ಅಂಥವರ ಹೆಸರನ್ನು ನೋ ಫ್ಲೈಯಿಂಗ್‌ ಲಿಸ್ಟ್‌ಗೆ ಹಾಕಬೇಕು ಎಂದು ಹೇಳಿದೆ. ಈ ಕಠಿಣ ನಿಯಮಗಳು ಎಲ್ಲ ಏರ್‌ಪೋರ್ಟ್‌ ಮತ್ತು ವಿಮಾನಗಳಲ್ಲಿ ಪಾಲನೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಡಿಜಿಸಿಎಯದ್ದಾಗಿದೆ.

ಇದನ್ನೂ ಓದಿ: ತರಬೇತಿ ಪೂರ್ಣವಾಗದೆ ವಿಮಾನ ಲ್ಯಾಂಡ್‌ ಮಾಡಿದ ಪೈಲಟ್‌; ಖಾಸಗಿ ಏರ್‌ಲೈನ್ಸ್‌ಗೆ 10 ಲಕ್ಷ ರೂ.ದಂಡ

Exit mobile version