ಚಂಡೀಗಢ: ಮನೆಯಲ್ಲಿ ಊಟ ಮಾಡಿ ಬೇಸರವಾಗಿರುತ್ತದೆ. ವೀಕೆಂಡ್ ನಮಗೆಂದೇ ಬಂದಿರುತ್ತದೆ. ನಾಲಗೆ ಬೇರೆ ಚಿಕನ್ ಬಯಸುತ್ತದೆ. ಮನಸ್ಸು ರೆಸ್ಟೋರೆಂಟ್‌ಗೆ ಹೋಗೋಣ ಎನಿಸುತ್ತದೆ. ಕುಟುಂಬಸ್ಥರು, ಸ್ನೇಹಿತರನ್ನು ಕರೆದುಕೊಂಡು ನಾನ್‌ವೆಜ್ ಹೋಟೆಲ್‌ಗೆ ಹೋಗಿ ಗಡದ್ದಾಗಿ ತಿನ್ನುವುದೇ ಮಹದಾನಂದ. ಹೀಗೆ, ಚಿಕನ್ ಸವಿಯಲು ಪಂಜಾಬ್‌ನ ಲುಧಿಯಾನ ರೆಸ್ಟೋರೆಂಟ್‌ಗೆ ತೆರಳಿದ ವ್ಯಕ್ತಿಯೊಬ್ಬರಿಗೆ ಹೊಟ್ಟೆ ತೊಳೆಸಿದ ಅನುಭವವಾಗಿದೆ. ಆರ್ಡರ್ ಮಾಡಿದ ಚಿಕನ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು, ಅವರು ಮಾಡಿದ ವಿಡಿಯೊ (Viral Video) ಭಾರಿ ವೈರಲ್ ಆಗಿದೆ.
ಹೌದು, ವಿವೇಕ್ ಕುಮಾರ್ ಎಂಬುವರು ಕಳೆದ ಭಾನುವಾರ ಲುಧಿಯಾನದ ವಿಶ್ವಕರ್ಮ ಚೌಕ್‌ನಲ್ಲಿರುವ ಪ್ರಕಾಶ್ ಡಾಬಾಗೆ ತೆರಳಿದ್ದಾರೆ. ಡಾಬಾದಲ್ಲಿ ಚಿಕನ್ ಆರ್ಡರ್ ಮಾಡಿದ ಅವರು ವೇಟರ್ ತಂದ ಕೂಡಲೇ ತಿನ್ನಲು ಆರಂಭಿಸಿದ್ದಾರೆ. ಇದೇ ವೇಳೆ, ಎಲ್ಲೋ ಏನೋ ಮಿಸ್ ಹೊಡೆಯುತ್ತಿದೆ ಎಂದು ಅಂದಾಜಿಸಿದ ಅವರು ಚಿಕನ್ ಪೀಸ್‌ಅನ್ನು ಗಮನವಿಟ್ಟು ನೋಡಿದ್ದಾರೆ. ಆಗ ಅವರ ತಟ್ಟೆಯಲ್ಲಿರುವುದು ಕೋಳಿಯ ಮೂಳೆ ಅಲ್ಲ, ಸತ್ತ ಇಲಿ ಎಂಬುದು ಗೊತ್ತಾಗಿದೆ. ಇದನ್ನು ಅವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
Parkash dhaba Ludhiana. India Serve rat in chicken curry. Restaurant owner bribe the food inspector and go free??? Very poor standards in Kitchen of many Indian restaurants. Be aware . pic.twitter.com/chIV59tbq5
— NC (@NrIndiapolo) July 3, 2023
ಡಾಬಾ ಮಾಲೀಕರ ವಿರುದ್ಧ ಎಫ್‌ಐಆರ್
ಚಿಕನ್‌ನಲ್ಲಿ ಸತ್ತ ಇಲಿ ಪತ್ತೆಯಾದ ಕುರಿತು ಪ್ರೇಮ್ ನಗರ ನಿವಾಸಿಯಾದ ವಿವೇಕ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿಕನ್ ಪತ್ತೆಯಾದ ಕುರಿತು ಡಾಬಾದ ಸಿಬ್ಬಂದಿಗೆ ವಿಚಾರಿಸಿದಾಗ, ಅವರು ಕ್ಷಮೆಯಾಚಿಸುವ ಬದಲು ವಿವೇಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಹಾಗಾಗಿಯೇ, ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಡಾಬಾ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Viral News : ಮನೆ ಬಾಡಿಗೆಗೆ ಕೊಡುವುದರೊಂದಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಓನರ್! ವೈರಲ್ ಆಗ್ತಿದೆ ಕಿಮ್ಚಿ ಕಥೆ
ಒಟ್ಟಿನಲ್ಲಿ ವೀಕೆಂಡ್ ಎಂದು ರೆಸ್ಟೋರೆಂಟ್‌ಗೆ ಹೋಗಿ ಚಿಕನ್ ತಿನ್ನುವ ಮೊದಲು ಹಲವು ಬಾರಿ ಯೋಚಿಸಬೇಕು ಹಾಗೂ ಪ್ಲೇಟ್‌ನಲ್ಲಿರುವುದು ಚಿಕನ್ನೇ ಎಂಬುದರ ಬಗ್ಗೆ ಪರಿಶೀಲನೆ ಮಾಡಿಕೊಂಡೇ ತಿನ್ನಬೇಕು ಎಂಬುದು ಲುಧಿಯಾನದಲ್ಲಿ ಕಸಿವಿಸಿ ಅನುಭವಿಸಿದ ವಿವೇಕ್ ಕುಮಾರ್ ಪ್ರಕರಣದ ತಾತ್ಪರ್ಯವಾಗಿದೆ. ನೀವೂ ಮುಂದಿನ ಬಾರಿ ಚಿಕನ್ ತಿನ್ನಲು ಹೋದಾಗ ಹುಷಾರಾಗಿರಿ. ಇಲ್ಲದಿದ್ದರೆ, ಇಲಿಯೋ, ಹೆಗ್ಗಣವೋ ಹೊಟ್ಟೆ ಸೇರುವ ಅಪಾಯ ಇರುತ್ತದೆ.