Site icon Vistara News

Dead Woman Found Living | 2ನೇ ಪತಿಯೊಂದಿಗೆ ಬದುಕುತ್ತಿದ್ದ ʻಸತ್ತʼ ಮಹಿಳೆ, ಕಾಣೆ ಆಗಿದ್ದಾಕೆ ಈಗ ಕಂಬಿ ಹಿಂದೆ

Dead Woman Found Living

ಜೈಪುರ: ಮಹಿಳೆಯೊಬ್ಬಳು ತನ್ನ ಗಂಡನಿಂದಲೇ ಹತಳಾಗಿದ್ದಾಳೆಂದು ತಿಳಿದುಕೊಂಡಿದ್ದ ಪ್ರಕರಣಕ್ಕೆ ಹಲವು ವರ್ಷಗಳ ನಂತರ ವಿಲಕ್ಷಣ ತಿರುವು ದೊರೆತಿದೆ. ಆಕೆಯ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಅವಳ ಪತಿ ಈಗ ಜಾಮೀನಿನ ಮೇಲಿದ್ದರೆ, ಆರು ವರ್ಷಗಳ ನಂತರ ʻಸತ್ತʼ ಹೆಂಡತಿ ತನ್ನ ಎರಡನೇ ಗಂಡನೊಂದಿಗೆ ರಾಜಸ್ಥಾನದಲ್ಲಿ (Dead Woman Found Living) ಹಾಯಾಗಿರುವುದು ಪತ್ತೆಯಾಗಿದೆ.

ಆರತಿ ದೇವಿ ಎಂಬ ಮಹಿಳೆ ಸೋನು ಸೈನಿ ಎಂಬಾತನೊಂದಿಗೆ 2015ರಲ್ಲಿ ವಿವಾಹವಾಗಿದ್ದಳು. ಅದರ ಮರುವರ್ಷವೇ ಆಕೆ, ವೃಂದಾವನದಲ್ಲಿದ್ದ ಅವರ ಬಾಡಿಗೆ ಮನೆಯಿಂದ ಕಣ್ಮರೆಯಾಗಿದ್ದಳು. ತನ್ನ ಮಗಳನ್ನು ಆಕೆಯ ಗಂಡನೇ ಕೊಂದಿದ್ದಾನೆಂದು ಆಕೆಯ ತಂದೆ ಸೂರಜ್‌ ಪ್ರಕಾಶ್‌ ಗುಪ್ತಾ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಸರಿಯಾಗಿ, ಅನಾಮಿಕ ಮಹಿಳೆಯೊಬ್ಬಳ ದೇಹವೂ ಸಿಕ್ಕು, ಅದು ತನ್ನ ಮಗಳದ್ದೇ ಎಂದು ತಂದೆ ಹೇಳಿದ್ದರಿಂದ, ಸೋನು ಸೈನಿ ಮತ್ತು ಆತನ ಮಿತ್ರ ಗೋಪಾಲ್‌ ಸೈನಿಯನ್ನು ಬಂಧಿಸಲಾಗಿತ್ತು. ಅವರಿಬ್ಬರೂ ಸ್ಥಳೀಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೋನು ಸುಮಾರು ಒಂದೂವರೆ ವರ್ಷ ಜೈಲಿನಲ್ಲಿದ್ದರೆ, ಗೋಪಾಲ್ ಸುಮಾರು 9 ತಿಂಗಳು ಕಂಬಿ ಎಣಿಸಿದ್ದ. ಅಲಹಾಬಾದ್‌ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದ ಅವರಿಬ್ಬರೂ, ಆರತಿ ದೇವಿ ಎಲ್ಲಿ ಹೋದಳು ಎಂಬುದನ್ನು ಪತ್ತೆ ಮಾಡಲು ತೊಡಗಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಗಳಿಗೆ, ಗೋಪಾಲ್‌ ಮತ್ತು ಸೋನುವನ್ನು ಬಂಧಿಸಿದ್ದರಿಂದ 15 ಸಾವಿರ ರೂ. ಇನಾಮು ಸಹ ದೊರೆತಿತ್ತು. “ರಾಜಸ್ಥಾನದ ಗಡಿ ಜಿಲ್ಲೆಯಲ್ಲಿರುವ ಮೆಹಂದಿಪುರ್‌ ಬಾಲಾಜಿ ದೇವಾಲಯದಲ್ಲಿ ಆರತಿ ಮತ್ತು ಸೋನು ಭೇಟಿ ಮಾಡಿದ್ದರು. ಆನಂತರ ಆರತಿಯ ತಂದೆಗೆ ತಿಳಿಸದೆಯೇ ಅವರು 2015ರಲ್ಲಿ ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದರು” ಎಂದು ಪೊಲೀಸ್‌ ಅಧಿಕಾರಿಗಳು ವಿವರ ನೀಡಿದ್ದಾರೆ. 2016ರ ಮಾರ್ಚ್‌ನಲ್ಲಿ ಸೋನು ಮತ್ತು ಸಂಗಡಿಗರ ಮೇಲೆ ಕೊಲೆಯ ಪ್ರಕರಣ ದಾಖಲಾಗಿತ್ತು.

ಇದಾದ ಆರು ವರ್ಷಗಳ ನಂತರ, ʻಸತ್ತʼ ಆರತಿ ದೇವಿ ರಾಜಸ್ಥಾನದಲ್ಲಿ ತನ್ನ ಎರಡನೇ ಗಂಡನೊಂದಿಗೆ ಇರುವುದನ್ನು ಸೋನು ಮತ್ತು ಗೋಪಾಲ್‌ ಪತ್ತೆ ಮಾಡಿ, ಮಥುರಾದ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಆಕೆಯನ್ನು ಬಂಧಿಸಿದ್ದು, ಎರಡು ಆಧಾರ್‌ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡರಲ್ಲೂ ಬೇರೆಬೇರೆ ಜನ್ಮ ದಿನಾಂಕಗಳನ್ನೂ ಆಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ದಿವ್ಯಾಗೆ ʻನೆವರ್‌ ಗಿವ್‌ ಅಪ್‌ʼಎಂದ ಅರವಿಂದ್‌: ಪ್ರೀತಿಯ ಸಂದೇಶ ಪೋಸ್ಟ್‌ ವೈರಲ್‌!

Exit mobile version