Site icon Vistara News

Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ

Sara Sunny

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court of India) ಸೋಮವಾರ ವಿಶಿಷ್ಟ ವಕೀಲರ ಕಲಾಪಕ್ಕೆ ಸಾಕ್ಷಿಯಾಯಿತು. ಕಿವುಡ ವಕೀಲೆ ಸಾರಾ ಸನ್ನಿ (Lawyer Sara Sunny) ಇಂಟರ್‌ರ್ಪ್ರಿಟರ್ ಮೂಲಕ ಸಂಜ್ಞೆ ಭಾಷೆ ಬಳಸಿ ವಾದಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಆಲಿಸಿತು.

ವರ್ಚುವಲ್ ಪ್ರೊಸೀಡಿಂಗ್ಸ್ ನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ, ಮೊದಲಿಗೆ ಕಿವುಡ ನ್ಯಾಯವಾದಿ ಸಾರಾ ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡಲು ನಿರಾಕರಿಸಿತ್ತು. ಆದರೆ, ಶೀಘ್ರದಲ್ಲೇ ಅವರ ವಿಚಾರಣೆಯ ಸರದಿ ಬಂದಾಗ ಆಕೆಯ ಇಂಟರ್‌ರ್ಪ್ರಿಟರ್ ಸೌರಭ್ ರಾಯ್ ಚೌಧರಿ ಪರದೆಯ ಮೇಲೆ ಕಾಣಿಸಿಕೊಂಡರು. ಚೌಧರಿ ಅವರು, ಸಾರಾ ಸನ್ನಿ ಅವರ ಸಂಕೇತ ಭಾಷೆಯನ್ನು ಅನುವಾದಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದರು.

ನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡುವಂತೆ ನಿಯಂತ್ರಣ ಕೊಠಡಿ ಮತ್ತು ಇಂಟರ್ಪ್ರಿಟರ್‌ಗೆ ಸೂಚನೆ ನೀಡಿದರು. ಇದಾದ ಬಳಿಕ ಇಬ್ಬರೂ ತೆರೆ ಮೇಲೆ ಕಾಣಿಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು. ಸನ್ನಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಸಂಚಿತ್ ಐನ್ ಅವರು ಅರೆಂಜ್ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಎಲ್ಲರಿಗೂ ಸಮಾನ ನ್ಯಾಯ ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ. ಕಳೆದ ವರ್ಷ, ದೈಹಿಕವಾಗಿ ಅಸಮರ್ಥರಾದವರು ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ಬಂದಾಗ ಎದುರಿಸುವ ಸಮಸ್ಯೆಗಳು ಹಾಗೂ ಎಲ್ಲರಿಗೂ ನ್ಯಾಯ ವ್ಯವಸ್ಥೆ ದೊರೆಯುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶೇಷ ಎಂದರೆ, ಸಿಜೆಐ ಚಂದ್ರಚೂಡ್ ಅವರೂ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court : ಪಿಎಂ ಕೇರ್ಸ್​ ಎಲ್ಲ ಅನಾಥ ಮಕ್ಕಳಿಗೂ ಮೀಸಲಾಗಲಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೇಳಿದ್ಯಾಕೆ?

ಸಂಜ್ಞೆ ಭಾಷೆಯ ಮೂಲಕ ವಾದ ಮಾಡಿದ ಸಂಚಿತಾ ಐನ್ ಅವರು, ಈ ಕ್ಷಣದ ಮಹತ್ವವು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನಿಜವಾದ ಒಳಗೊಳ್ಳುವಿಕೆ ಮತ್ತು ನ್ಯಾಯ ಪ್ರವೇಶದ ಹಾದಿಯಲ್ಲಿ ಉಳಿದಿರುವ ಸವಾಲುಗಳೊಂದಿಗೆ ಸಂಬಂಧ ಹೊಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಸಂಜ್ಞೆ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಆಡಳಿತ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಭಾನುವಾರ, ಸುಪ್ರೀಂ ಕೋರ್ಟ್ ಸಹ ಮೊದಲ ಬಾರಿಗೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ತನ್ನ ಎರಡು ದಿನಗಳ ರಾಷ್ಟ್ರೀಯ ಮಧ್ಯಸ್ಥಗಾರರ ಸಮಾಲೋಚನೆಯಲ್ಲಿ ಸಂಜ್ಞೆ ಭಾಷಾ ವ್ಯಾಖ್ಯಾನಕಾರರನ್ನು ಬಳಸಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version