Site icon Vistara News

ಗೋಧ್ರಾ ರೈಲು ಹತ್ಯಾಕಾಂಡ ದೋಷಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿ: ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ ಮನವಿ

death penalty for 11 Godhra Train Burning Convicts, Gujarat plead to Supreme Court

ನವದೆಹಲಿ: 2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ದೋಷಿಗಳಾಗಿರುವ 11 ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದು ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಈ ಪ್ರಕರಣದ ಆರೋಪಿಗಳಾಗಿದ್ದ 11 ಜನರ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಜೀವಾವಧಿಗೆ ಇಳಿಸಿತ್ತು. 2002ರಲ್ಲಿ ಗುಜರಾತ್‌ನ ಗೋಧ್ರಾ ಎಂಬಲ್ಲಿ ರೈಲು ಬೋಗಿಗೆ ಬೆಂಕಿ ಹಚ್ಚಿ, 59 ಕರ ಸೇವಕರು ಜೀವಂತವಾಗಿ ಸುಟ್ಟ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ಜಸ್ಟೀಸ್ ಪಿ ಎಸ್ ನರಸಿಂಹ ಮತ್ತು ಜಸ್ಟೀಸ್ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಜಾಮೀನು ಅರ್ಜಿಗಳನ್ನು ಮೂರು ವಾರದ ಬಳಿಕ ವಿಚಾರಣೆಗೆ ನಿಗದಿಪಡಿಸಿದೆ. ಆರೋಪಿಗಳಿಗೆ ನೀಡಲಾದ ನಿಜವಾದ ಶಿಕ್ಷೆಗಳು ಮತ್ತು ಇದುವರೆಗೆ ಜೈಲಿನಲ್ಲಿ ಕಳೆದ ಅವಧಿಯಂತಹ ವಿವರಗಳನ್ನು ನೀಡುವ ಸಮಗ್ರ ಚಾರ್ಟ್ ಅನ್ನು ಸಲ್ಲಿಸುವಂತೆ ಪೀಠವು, ಎರಡೂ ಕಡೆಯ ವಕೀಲರಿಗೆ ತಿಳಿಸಿದೆ.

ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಲ್ಪಟ್ಟಿರುವ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಕಾಯಂ ಮಾಡಬೇಕು. ಯಾಕೆಂದರೆ ಅತ್ಯಂತ ವಿರಳಾತಿವಿರಳ ಪ್ರಕರಣರವಾಗಿದ್ದು, ರೈಲಿನ ಬೋಗಿಗೆ ಬೆಂಕಿ ಹಚ್ಚಿ ಮಹಿಳೆಯರು, ಮಕ್ಕಳು ಸೇರಿದಂತೆ 59 ಮಕ್ಕಳನ್ನು ಕೊಲ್ಲಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದರು.

ಇದನ್ನೂ ಓದಿ: Post Godhra Case : ಗೋಧ್ರೋತ್ತರ ಗಲಭೆ ಪ್ರಕರಣ: 17 ಜನರ ಕೊಲೆ ಆರೋಪ ಹೊತ್ತ 22 ಆರೋಪಿಗಳು ಖುಲಾಸೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯವು ವಿಧಿಸಿತ್ತು. ಹೈಕೋರ್ಟ್‌ನಲ್ಲಿ ಒಟ್ಟು 31 ಆರೋಪಿಗಳ ಬಗ್ಗೆ ವಿಚಾರಣೆ ನಡೆದು, 11 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಈ ಪ್ರಕರಣವು ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

Exit mobile version