ನವದೆಹಲಿ: ಸ್ವಾತಂತ್ರ್ಯದ ಬಳಿಕ ದೇಶವನ್ನು ಮುನ್ನಡೆಸಿದ ಪ್ರಧಾನಿಗಳು ಮಾಡಿದ ಸಾಲ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಅಂಕಿ-ಅಂಶವನ್ನು ಇಟ್ಟುಕೊಂಡು ಮೋದಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ನರೇಂದ್ರ ಮೋದಿ (Narendra Modi) ಅವರು ಆಡಳಿತ ನಡೆಸುತ್ತಿರುವ 9 ವರ್ಷದ ಅವಧಿಯಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ ಮೋದಿ ಅವಧಿಯಲ್ಲಾದ ಸಾಲದ ಕುರಿತು ಮಾಹಿತಿ ನೀಡಿದರು. “2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ, ದೇಶದ ಸಾಲ 155 ಲಕ್ಷ ಕೋಟಿ ರೂಪಾಯಿ ಇದೆ. ಒಂಬತ್ತು ವರ್ಷದಲ್ಲಿಯೇ 100 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲಾಗಿದೆ” ಎಂದು ಅಂಕಿ-ಅಂಶಗಳ ಸಮೇತ ಕುಟುಕಿದರು.
“ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ತೆಗಳುತ್ತಿದ್ದರು. ಭ್ರಷ್ಟ, ಅಸಮರ್ಥ ಎಂದೆಲ್ಲ ಟೀಕಿಸುತ್ತಿದ್ದರು. ಆದರೆ, ಒಂಬತ್ತು ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಏರಿಕೆಯಾಗಿದ್ದು ನೋಡಿದರೆ, ಟೀಕೆಗಳು ಮೋದಿ ಅವರಿಗೇ ಹೆಚ್ಚು ಸಮಂಜಸ ಎನಿಸುತ್ತವೆ. ದೇಶದ ಆರ್ಥಿಕತೆ ಹಾಳು ಮಾಡಿದ್ದು, ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಹಣದುಬ್ಬರ ಹೆಚ್ಚಳ ಸೇರಿ ಹಲವು ದಿಸೆಯಲ್ಲಿ ದೇಶವನ್ನು ಮೋದಿ ಸರ್ಕಾರ ಹಾಳುಮಾಡಿದೆ. ಎಲ್ಲ ನಕಾರಾತ್ಮಕ ಏರಿಕೆಗಳು ಎಚ್ಚರಿಕೆಯ ಗಂಟೆಗಳಾಗಿವೆ” ಎಂದು ಹೇಳಿದರು.
ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
“ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ 67 ವರ್ಷದಲ್ಲಿ 14 ಪ್ರಧಾನಿಗಳು 55 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರು. ಆದರೆ, ಮೋದಿ ಅವರೊಬ್ಬರೇ 100 ಕೋಟಿ ರೂಪಾಯಿ ಸಾಲ ಮಾಡಿರುವುದು ಅಪಾಯಕಾರಿ ಸಂಗತಿಯಾಗಿದೆ. ಸದ್ಯದ ಆರ್ಥಿಕ ಬೆಳವಣಿಗೆಯ ಕುರಿತ ಮಾಹಿತಿಯು ಹೆಡ್‌ಲೈನ್ ಮ್ಯಾನೇಜ್‌ಮೆಂಟ್ ರೀತಿಯೇ ಆಗಿದೆ. ಇದರಿಂದ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದಿಲ್ಲ” ಎಂದು ತಿಳಿಸಿದರು.