ನವದೆಹಲಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಕ್ಷಮಾದಾನ ಅರ್ಜಿಗಳ (Mercy Petitions) ವಿಲೇವಾರಿಯಲ್ಲಿ ಭಾರಿ ವಿಳಂಬವಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ, ಇನ್ನು ಮುಂದೆ ರಾಜ್ಯಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ಷಿಪ್ರವಾಗಿ ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂಬುದಾಗಿ ನಿರ್ದೇಶನ ನೀಡಿದೆ.
ಒಬ್ಬ ಮಹಿಳೆ ಹಾಗೂ ಆಕೆಯ ಸಹೋದರಿಗೆ ಬಾಂಬೆ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದ್ದನ್ನು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಾಲಯವು ಕ್ಷಮಾದಾನ ಅರ್ಜಿಗಳ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
“ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು ಸಲ್ಲಿಸಿದ ಕ್ಷಮಾದಾನ ಅರ್ಜಿಗಳ ವಿಲೇವಾರಿಯು ವಿಳಂಬವಾದರೆ ಗಲ್ಲು ಶಿಕ್ಷೆಯ ಆಶಯಕ್ಕೇ ಧಕ್ಕೆ ತಂದಂತಾಗುತ್ತದೆ. ಅಪರಾಧಿಗಳಿಗೆ ಅವರ ಹಣೆಬರಹ ಗೊತ್ತಾಗಬೇಕು, ಅಪರಾಧದ ತೀವ್ರತೆಯ ಅರಿವಾಗಬೇಕು ಎಂದರೆ ಕ್ಷಮಾದಾನ ಅರ್ಜಿಗಳ ತ್ವರಿತ ವಿಲೇವಾರಿ ಆಗಬೇಕು. ಹಾಗಾಗಿ, ಆಯಾ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ಷಮಾದಾನ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕು” ಎಂದು ತಿಳಿಸಿತು.
ಮಹಿಳೆ ಮತ್ತು ಆಕೆಯ ಸಹೋದರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಮಹಿಳೆ ಹಾಗೂ ಆಕೆಯ ಸಹೋದರಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸರ್ಕಾರ ಅಥವಾ ರಾಜ್ಯಪಾಲರು 7 ವರ್ಷ 10 ತಿಂಗಳಾದರೂ ವಿಲೇವಾರಿ ಮಾಡದ ಕಾರಣ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 2001ರಲ್ಲಿ 13 ಮಕ್ಕಳನ್ನು ಅಪಹರಿಸಿ, ಅವರಲ್ಲಿ 9 ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಸ್ಥಳೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. 2004ರಲ್ಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. 2006ರಲ್ಲಿ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ, ಕ್ಷಮಾದಾನ ಅರ್ಜಿಯ ವಿಲೇವಾರಿಯಲ್ಲಿ ವಿಳಂಬವಾಗಿತ್ತು.
ಇದನ್ನೂ ಓದಿ: Bilkis Bano Case | 11 ಆರೋಪಿಗಳಿಗೆ ಕ್ಷಮಾದಾನ ಕೊಟ್ಟ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್