ನವದೆಹಲಿ: ಪುರಾತನ ಇತಿಹಾಸವಿರುವ ರಾಮಸೇತುವನ್ನು (Ram Setu) ‘ರಾಷ್ಟ್ರೀಯ ಪಾರಂಪರಿಕ ಸ್ಮಾರಕ’ ಎಂದು ಘೋಷಿಸುವ ಕಾಲ ಸನ್ನಿಹಿತವಾಗಿದೆಯೇ? ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ನೋಡಿದರೆ ಸನ್ನಿಹಿತವಾಗಿದೆ ಎಂದು ಎನಿಸುತ್ತಿದೆ. “ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂಬುದಾಗಿ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಾಷ್ಟ್ರೀಯ ಸ್ಮಾರಕ ಎಂಬುದಾಗಿ ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ. ಇದೇ ವೇಳೆ ಕೇಂದ್ರ ಸರ್ಕಾರವು, “ಕೇಂದ್ರ ಸಂಸ್ಕೃತಿ ಸಚಿವಾಲಯವು ಘೋಷಣೆಯ ಪ್ರಕ್ರಿಯೆ ನಡೆಸುತ್ತಿದೆ” ಎಂದು ತಿಳಿಸಿದೆ.
ತಮಿಳುನಾಡಿನ ಕರಾವಳಿಯಲ್ಲಿರುವ ಪಂಬನ್ ದ್ವೀಪ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯನ್ನು ರಾಮಸೇತು ಎಂದು ಕರೆಯಲಾಗುತ್ತದೆ. ಇದಕ್ಕೆ ಆ್ಯಡಮ್ಸ್ ಸೇತುವೆ ಎಂದೂ ಕರೆಯಲಾಗುತ್ತದೆ. ಇದನ್ನು ರಾಷ್ಟ್ರೀಯ ಸ್ಮಾರಕ ಎಂಬುದಾಗಿ ಘೋಷಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. “ರಾಮಸೇತುವಿನ ಅಸ್ತಿತ್ವವನ್ನು ಕೇಂದ್ರ ಸರ್ಕಾರ ಒಪ್ಪಿರುವುದು ನನಗೆ ಸಿಕ್ಕ ಮೊದಲ ಜಯ” ಎಂದು ಸುಬ್ರಮಣಿಯನ್ ಸ್ವಾಮಿ ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ | Ram Setu | ರಾಮಸೇತು ರಾಷ್ಟ್ರೀಯ ಸ್ಮಾರಕ, ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ, ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ